ADVERTISEMENT

ಸಂಭ್ರಮದ ಜನ್ಮಾಷ್ಟಮಿ: ಸಾವಿರಾರು ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:30 IST
Last Updated 18 ಆಗಸ್ಟ್ 2025, 5:30 IST
ಕುಣಿಗಲ್ ಕೃಷ್ಣಸ್ವಾಮಿ ದೇವಾಲಯದಲ್ಲಿ ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ
ಕುಣಿಗಲ್ ಕೃಷ್ಣಸ್ವಾಮಿ ದೇವಾಲಯದಲ್ಲಿ ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ   

ಕುಣಿಗಲ್: ಪಟ್ಟಣದ ಕೃಷ್ಣಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿಯಿಂದ ಮೊದಲ ಬಾರಿಗೆ ನಡೆದ ಜನ್ಮಾಷ್ಟಮಿಯಲ್ಲಿ ಸಾವಿರಾರು ಮಕ್ಕಳ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಶನಿವಾರ ಬೆಳಗ್ಗೆಯಿಂದಲೇ ಪಟ್ಟಣದ ಭಜನಾ ಮಂಡಳಿಗಳ ಭಜನಾಮೃತ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಗಿದ್ದು, ರಾತ್ರಿವರೆಗೆ ಸ್ಥಳದಲ್ಲೇ ರಾಧಾ ಕೃಷ್ಣರ ಭಾವಚಿತ್ರ ಬರೆಯುವ, ರಂಗೋಲಿ ಬಿಡಿಸುವ, ಮಡಕೆ ಒಡೆಯುವ, ಪ್ರತಿಭಾ ಪುರಸ್ಕಾರ, ರಾಧಾ ಕೃಷ್ಣರ ವೇಷಭೂಷಣ ಸ್ಪರ್ಧೆ, ಭಕ್ತಿ ಗೀತೆ ಗಾಯನ, ಭರತನಾಟ್ಯ ಸ್ಪರ್ಧೆಗಳು ನಡೆದವು.

ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೂರಾರು ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣ ವೇಷಧಾರಿಯನ್ನಾಗಿಸಿ ಕರೆತಂದು ಸಂಭ್ರಮಿಸಿದರು. ಎಲ್ಲರಿಗೂ ಬಹುಮಾನ ವಿತರಿಸಲಾಯಿತು.

ADVERTISEMENT

ಇತಿಹಾಸ ಪ್ರಚಾರಕ ಧರ್ಮೇಂದ್ರ ಕುಮಾರ್ ಮಾತನಾಡಿ, ತಾಲ್ಲೂಕು ಐತಿಹಾಸಿಕ ಪ್ರಸಿದ್ಧ ಕೇಂದ್ರ. ಕೆಂಪೇಗೌಡರ ಕಾಲದ ಕುರುಹುಗಳಿವೆ, ಪುರಾತನ ಕಾಲದಿಂದಲೂ ವಾಣಿಜ್ಯ ಕೇಂದ್ರವಾಗಿ ಪ್ರಸಿದ್ಧವಾಗಿತ್ತು. ತಾಲ್ಲೂಕಿನಲ್ಲಿ ಅಂದಿನ ಕಾಲಕ್ಕೆ ದಕ್ಷಿಣ ಭಾರತದ ಪ್ರಥಮ ಕುದುರೆ ಫಾರಂ ಹೊಂದಿದ ಕೇಂದ್ರವಾಗಿದೆ. ಅಂದು ಸಂಚಾರ, ಯುದ್ಧಕ್ಕಾಗಿ ಕುದುರೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಕುದುರೆಗಳನ್ನು ಉತ್ತರ ಭಾರತದಿಂದ ತಂದು ದಿನದ ಲೆಕ್ಕದಲದಲಿ ಬಾಡಿಗೆಗೆ ನೀಡುತ್ತಿದ್ದರು.

ಉತ್ತರ ಭಾರತದಿಂದ ತರುವ ಬದಲು ಕುದುರೆ ಸಾಕಾಣಿಕೆಗೆ ಭೌಗೋಳಿಕವಾಗಿ ಪ್ರಶಸ್ತ ಸ್ಥಳವಾಗಿದ್ದ ಕುಣಿಗಲ್‌ನಲ್ಲಿ ಟಿಪ್ಪುಸುಲ್ತಾನ್‌ ಕುದುರೆ ಫಾರಂ ನಿರ್ಮಿಸಿದ್ದರು. ಶರಣ ಸಾಹಿತ್ಯದ ಪುನರುತ್ಥಾನ ಮಾಡಿದ ಸಿದ್ದಲಿಂಗೇಶ್ವರರು ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯಾಗಿರುವುದು ಸಹ ವಿಶೇಷವಾಗಿದೆ. ಇಂತಹ ತಾಲ್ಲೂಕಿನ ಜನ ತಮ್ಮ ಹೆಸರಿನ ಮುಂದೆ ಕುಣಿಗಲ್ ಸೇರಿಸುವ ಮೂಲಕ ಸಾರ್ಥಕತೆ ಪಡೆಯಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ರಾಜೇಶ್ ಗೌಡ, ಸ್ನೇಹ ಕಲಾ ಪ್ರತಿಷ್ಠಾನದ ದಿನೇಶ್ ಕುಮಾರ್, ಸಮಿತಿಯ ಪ್ರಮುಖರಾದ ಮಂಜುನಾಥ್, ಲಕ್ಷ್ಮಣಗೌಡ, ಸುರೇಶ್, ಗಂಗಾಧರ್, ಪುರುಷೋತ್ತಮ್, ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.