ADVERTISEMENT

ಕೃಷ್ಣ ರಾಜೇಂದ್ರ ಪುರಭವನ ಕಟ್ಟಡ ಸಂರಕ್ಷಣೆಗೆ ಆಗ್ರಹ

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಪಾರಂಪರಿಕ ಕಟ್ಟಡ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:18 IST
Last Updated 12 ಮೇ 2019, 20:18 IST
ಪುರಭವನ ಒಳಗಡೆ ನಡೆದಿರುವ ರೂಫ್ ಸೀಲಿಂಗ್ ಕಾಮಗಾರಿ ನೋಟ
ಪುರಭವನ ಒಳಗಡೆ ನಡೆದಿರುವ ರೂಫ್ ಸೀಲಿಂಗ್ ಕಾಮಗಾರಿ ನೋಟ   

ತುಮಕೂರು: ನಗರದ ’ಪಾರಂಪರಿಕ ಕಟ್ಟಡವಾದ ’ಶ್ರೀಕೃಷ್ಣರಾಜೇಂದ್ರ ಪುರಭವನ’ ದ ಸಭಾಂಗಣದಲ್ಲಿ ನಡೆದಿರುವ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕ ಹೋರಾಟಗಾರ ಆರ್. ವಿಶ್ವನಾಥನ್ ಒತ್ತಾಯ ಮಾಡಿದ್ದಾರೆ.

ರಾಜ್ಯಪಾಲರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪುರಭವನ ಕಟ್ಟಡವು ನಗರದಲ್ಲಿರುವ ಅತ್ಯಾಕರ್ಷಕ ಪಾರಂಪರಿಕ, ವಿಭಿನ್ನ ವಾಸ್ತುಶೈಲಿಯ ಕಟ್ಟಡವಾಗಿದೆ. ಆದರೆ, ಈಗ ಇದ್ದಕ್ಕಿದ್ದಂತೆಯೇ ಈ ಕಟ್ಟಡದ ಸಭಾಂಗಣದ ಒಳಗಡೆ ವಾಲ್ ಪ್ಯಾನಲಿಂಗ್, ರೂಫ್ ಸೀಲಿಂಗ್ ಸೇರಿದಂತೆ ವಿವಿಧ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ಕಟ್ಟಡದ ಮೂಲ ಸೌಂದರ್ಯಕ್ಕೆ ಧಕ್ಕೆಯಾಗಲಿದೆ. ಅಲ್ಲದೇ ನವೀಕರಣ ಹೆಸರಲ್ಲಿ ವಿರೂಪಗೊಳಿಸುವ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.

ADVERTISEMENT

ಸಭಾಂಗಣದ ಒಳಭಾಗದ ಗೋಡೆಗಳಿಗೆಲ್ಲ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದ್ದು, ಆ ಮೂಲಕ ಪುರಾತನ ಗೋಡೆಯನ್ನು ಮುಚ್ಚುವ ಯತ್ನ ನಡೆದಿದೆ. ಅದೇ ರೀತಿ ಮೇಲ್ಭಾಗಕ್ಕೂ ಕಂಬಿ ಅಳವಡಿಸಿ ಹಳೆಯ ಸುಂದರ ಚಾವಣಿ ಕಾಣದಂತೆ ಮುಚ್ಚಲಾಗುತ್ತಿದೆ. ಇನ್ನೂ ಯಾವ್ಯಾವ ರೀತಿ ವಿರೂಪಗೊಳಿಸಲಾಗುತ್ತದೆ ಎಂಬುದು ನಿಗೂಢವಾಗಿದೆ ಎಂದು ಮನವಿಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯಷ್ಟೇ ನವೀಕರಣ

ನಗರದ ಹೃದಯಭಾಗದಲ್ಲಿಯೇ ಕೃಷ್ಣರಾಜೇಂದ್ರ ಪುರಭವನ ಇದೆ. 1916ರಲ್ಲಿ ಆಗಿನ ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಶತಮಾನ ಕಂಡಿರುವ ಬೃಹತ್ ಕಟ್ಟಡವಾಗಿದೆ. ನಾನಾ ಕಾರಣಗಳಿಂದ ಅಲಕ್ಷಿಸಲಾಗಿದ್ದ ಈ ಕಟ್ಟಡವನ್ನು 2014–15ರಲ್ಲಿ ಎಸ್‌ಎಫ್‌ಸಿ ಅನುದಾನ ₹ 18 ಲಕ್ಷದಲ್ಲಿ ಸಿವಿಲ್ ಕಾಮಗಾರಿಗೆ ಹಾಗೂ ₹ 3.5 ಮೊತ್ತವನ್ನು ವಿದ್ಯುದ್ದೀಕರಣಕ್ಕೆ ವೆಚ್ಚ ಮಾಡಲಾಗಿದೆ. ಈ ನವೀಕರಣ ವೇಳೆ ಮೂಲ ಕಟ್ಟಡಕ್ಕೆ, ವಿನ್ಯಾಸಕ್ಕೆ ಧಕ್ಕೆ ಬಾರದಂತೆ ನವೀಕರಿಸಲಾಗಿತ್ತು. ತುಕ್ಕು ಹಿಡಿದ ಕಿಟಕಿ, ಬಾಗಿಲು ದುರಸ್ತಿಪಡಿಸಲಾಗಿತ್ತು ಎಂದು ವಿವರಿಸಿದ್ದಾರೆ.

ಸಭಾಂಗಣದ ವೇದಿಕೆಯ ಮೆಟ್ಟಿಲನ್ನು ವಿಸ್ತಾರಗೊಳಿಸಲಾಗಿತ್ತು. ಮಳೆ ಬಂದಾಗ ಸೋರುತ್ತಿದ್ದ ಸ್ಥಳಗಳನ್ನು ದುರಸ್ತಿಗೊಳಿಸಲಾಗಿತ್ತು. ಕಟ್ಟಡದ ಒಳಗೆ ಮತ್ತು ಹೊರಗೆ ಬಣ್ಣ ಬಳಿದು ಆಕರ್ಷಕಗೊಳಿಸಲಾಗಿತ್ತು. ಹೊಸದಾಗಿ ವೈರಿಂಗ್ ಮಾಡಿ ವಿದ್ಯುತ್ ದೀಪ ಮತ್ತು ಫ್ಯಾನ್ ಅಳವಡಿಸಲಾಗಿತ್ತು. ಒಟ್ಟಾರೆ ಕಟ್ಟಡದ ಮೂಲ ಸ್ವರೂಪ ಹಾಗೆಯೇ ಉಳಿದಿತ್ತು. ಆದರೆ, ಈಗ ಮತ್ತೆ ಕೈಗೊಂಡಿರುವ ಕಾಮಗಾರಿ ವಿರೂಪಗೊಳಿಸುವಂತಿದೆ. ಕೂಡಲೇ ಇದನ್ನು ರಕ್ಷಣೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.