ಕುಣಿಗಲ್: ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ 25 ವರ್ಷದಿಂದ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಲಿಂಕ್ ಕೆನಾಲ್ ಅನುಷ್ಠಾನವಾಗುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಹೇಳುತ್ತಿದ್ದಾರೆ. ಆದರೆ ಅವರಿಂದಲೇ ತಾಲ್ಲೂಕಿಗೆ ಹೇಮಾವತಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1983ರ ನಂತರ ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಪ್ರಮುಖ ಕಾರಣಕರ್ತರು. ನಂತರದಲ್ಲಿ ಅಂದು ಜನತಾ ಪಕ್ಷದಲ್ಲಿದ್ದ ವೈ.ಕೆ.ರಾಮಯ್ಯ ಅವರ ಹೋರಾಟವೂ ಪ್ರಮುಖ ಪಾತ್ರವಹಿಸಿದೆ. ನಂತರ ದಿನಗಳಲ್ಲಿ ತಾಲ್ಲೂಕಿನ ಶಾಸಕರ ಹೋರಾಟದ ಫಲವಾಗಿ ನೀರು ಬಂದಿದೆ ಎಂದರು.
ಹೇಮಾವತಿ ನಾಲಾ ಹೋರಾಟದ ಇತಿಹಾಸ ಅರಿಯದ ಡಿ.ಕೆ.ಸುರೇಶ ಮತ್ತು ಡಾ.ರಂಗನಾಥ್ ಜೆಡಿಎಸ್ ಪಕ್ಷದವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕುಣಿಗಲ್ ತಾಲ್ಲೂಕಿಗೆ ಡಿ.ಕೆ.ಸುರೇಶ್ ಸಂಸದರಾಗಿ ಮತ್ತು ಡಾ.ರಂಗನಾಥ್ ಶಾಸಕರಾಗಿ ಆಯ್ಕೆಯಾದ ನಂತರ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ ಎಂದರು.
ಹೇಮಾವತಿ ನಾಲಾ ಮೂಲ ಯೋಜನೆ ಪ್ರಕಾರ 240 ಕಿ.ಮೀ. ಉದ್ದದ ನಾಲಾ ಕಾಮಗಾರಿಯಲ್ಲಿ 198 ಕಿ.ಮೀ. ಮಾತ್ರ ನಿರ್ಮಾಣವಾಗಿದೆ. ಹತ್ತು ವರ್ಷಗಳಿಂದ ಒಂದು ಮೀಟರ್ ಕಾಲುವೆ ಕಾಮಗಾರಿ ಸಹ ಸರಿಯಾಗಿ ನಡೆದಿಲ್ಲ. ಮೂಲ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ನೀರನ್ನು ಹರಿಸಲು ಗಮನಹರಿಸದೆ ಸಾವಿರ ಕೋಟಿಯ ಲಿಂಕ್ ಕೆನಾಲ್ ಕೈಗೆತ್ತಿಗೊಂಡಿದ್ದಾರೆ. ನಾಲಾ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ಪರಿಹಾರಧನ ವಿತರಿಸದ ಕಾರಣ ರೈತರು ನಾಲೆ ಮುಚ್ಚಿ ವ್ಯವಸಾಯ ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ವ್ಯಯವಾಗುತ್ತಿದೆ ಎಂದು ಹೇಳಿದರು.
ಶ್ರೀರಂಗ ಏತ ನೀರಾವರಿ ಯೋಜನೆಯಲ್ಲಿ ನೆಪಮಾತ್ರಕ್ಕೆ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ 17 ಕೆರೆಗಳನ್ನು ತೋರಿಸಿ ಮಾಗಡಿ ತಾಲ್ಲೂಕಿನ 83 ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕೆ.ಎಲ್.ಹರೀಶ್, ಶ್ರೀನಿವಾಸಮೂರ್ತಿ, ರಂಗಸ್ವಾಮಿ, ಯಡೆಯೂರು ದೀಪೂ, ತರಿಕೆರೆ ಪ್ರಕಾಶ್, ಮನೋಜ್, ಕಲ್ಲೆಗೌಡನ ಪಾಳ್ಯ ಜಗದೀಶ್, ಅರೆಪಾಳ್ಯ ಮಂಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.