ಕುಣಿಗಲ್: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಶಾಸಕರು ಮತ್ತು ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ವಾಗ್ವಾದ ತೀರಾ ವೈಯುಕ್ತಿಕ ಮಟ್ಟಕ್ಕೆ ಇಳಿದಿದ್ದು, ಕೌಟುಂಬಿಕ ವಿಚಾರಗಳು ಹಾದಿಬೀದಿ ರಂಪವಾಗುತ್ತಿವೆ.
ಈಚೆಗೆ ನಡೆದ ಲಿಂಕ್ ಕೆನಾಲ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಅವರು ಶಾಸಕ ಡಾ.ರಂಗನಾಥ್ ಟೀಕಿಸಲು ‘ಷಂಡ’ ಎಂಬ ಪದ ಬಳಸಿದ್ದರು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಈ ರೀತಿಯ ತೇಜೋವಧೆ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಮೃತೂರುನಲ್ಲಿ ನಡೆದ ಲಿಂಕ್ ಕೆನಾಲ್ ಜನಜಾಗೃತಿ ಸಭೆಯಲ್ಲಿ ಶಾಸಕ ಡಾ.ರಂಗನಾಥ್, ಬಿಜೆಪಿ ಮುಖಂಡರಿಗೆ ತಿರುಗೇಟು ನೀಡುವ ಭರದಲ್ಲಿ ‘ನಾನು ಮದುವೆಯಾಗಿ ಎರಡು ವರ್ಷಕ್ಕೆ ಗಂಡು ಮಗುವಿನ ತಂದೆಯಾದೆ. ಸುಸಂಸ್ಕೃತವಲ್ಲದ ಕುಟುಂಬದ ಬಿಜೆಪಿ ಮುಖಂಡರು ವಿವಾಹವಾಗಿ ಎಷ್ಟು ವರ್ಷಗಳ ನಂತರ ತಂದೆಯಾದರು?’ ಎಂದು ಪ್ರಶ್ನಿಸಿದ್ದರು.
ಶಾಸಕರ ಆಪ್ತ, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್, ಬಿಜೆಪಿ ಮುಖಂಡರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಮುಖಂಡರು ತರಾಟೆಗೆ ತೆಗದುಕೊಂಡ ನಂತರ ಸಾಮಾಜಿಕ ಜಾಲತಾಣದಿಂದ ಈ ಪೋಸ್ಟ್ ಅಳಿಸಿ ಹಾಕಲಾಗಿತ್ತು.
ಬಿಜೆಪಿ ಮುಖಂಡರು ರಾಜಕೀಯವಾಗಿ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡಿದ್ದಾರೆಯೇ ಹೊರತು ವೈಯುಕ್ತಿಕ ವಿಚಾರವಾಗಿ ಮಾತನಾಡಿಲ್ಲ ಎಂದು ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬಲರಾಂ ಸ್ಪಷ್ಟಪಡಿಸಿದ್ದರು.
ಒಂದು ವಾರದಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ವಾಕ್ಸಮರದಿಂದ ಜನರು, ಕಾರ್ಯಕರ್ತರು ಬೇಸತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.