ADVERTISEMENT

ಕುಣಿಗಲ್: ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 14:14 IST
Last Updated 22 ಏಪ್ರಿಲ್ 2024, 14:14 IST
ಕುಣಿಗಲ್ ಪೊಲೀಸ್ ಠಾಣೆ ಮುಂದೆ ಬಂಧನಕ್ಕೊಳಗಾದ ಆರೋಪಿಗಳ ಕುಟುಂಬದವರು ರೋಧಿಸಿದರು
ಕುಣಿಗಲ್ ಪೊಲೀಸ್ ಠಾಣೆ ಮುಂದೆ ಬಂಧನಕ್ಕೊಳಗಾದ ಆರೋಪಿಗಳ ಕುಟುಂಬದವರು ರೋಧಿಸಿದರು   

ಕುಣಿಗಲ್: ತಾಲ್ಲೂಕಿನ ಉರ್ಕೆಹಳ್ಳಿ ಬಳಿ ಭಾನುವಾರ ಮಧ್ಯಾಹ್ನ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್‌ ಶ್ರೀಧರ್ ಅವರ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ ನಾಲ್ಕು ಗಂಟೆಯೊಳಗೆ ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಕೀಲ ವೆಂಕಟೇಶ್, ಕುಪ್ಪುರಾಜು, ಮಹೇಂದ್ರಕುಮಾರ್, ಅಂಬುಲಿ, ಉದಯ್, ಪ್ರಭು ಮತ್ತು ಆನಂದ್ ಬಂಧಿತರು.

ಶ್ರೀಧರ್ ಮತ್ತು ವೆಂಕಟೇಶ್ ಸಹೋದರ ಸಂಬಂಧಿಗಳಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವಕೀಲ ವೆಂಕಟೇಶ, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತನ್ನ ಕಕ್ಷಿದಾರರನ್ನು ಕೃತ್ಯಕ್ಕೆ ಬಳಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್‌ ಶ್ರೀಧರ್ ಭಾನುವಾರ ಬೆಂಗಳೂರಿನಿಂದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೆಹಳ್ಳಿ ಹೋಬಳಿಯ ಎಂ.ಸಿದ್ದರಹಟ್ಟಿಗೆ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ ತಾಲ್ಲೂಕಿನ ಉರ್ಕೆಹಳ್ಳಿ ಬಳಿ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ದುಷ್ಕರ್ಮಿಗಳು ಅವರಿಗೆ ಹಲ್ಲೆ ನಡೆಸಿದ್ದರು.

ಶ್ರೀಧರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಸಿಪಿಐ ನವೀನ್ ಗೌಡ, ಪಿಎಸ್ಐ ಕೃಷ್ಣಕುಮಾರ್, ಸಿಬ್ಬಂದಿ ಯತೀಶ್, ಯೋಗೀಶ್, ನಟರಾಜು, ಹನುಮಂತು, ಷಡಕ್ಷರಿ ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.