ADVERTISEMENT

ಕುಣಿಗಲ್ | ಸ್ಮಶಾನ ಜಾಗ ವಿವಾದ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:43 IST
Last Updated 1 ಜುಲೈ 2025, 13:43 IST
ಕುಣಿಗಲ್ ತಾಲ್ಲೂಕು ಹುಲಿವಾನದಲ್ಲಿ ಸ್ಮಶಾನ ಜಾಗದ ವಿವಾದದ ಹಿನ್ನಲೆಯಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಯಾಗಿದ್ದು, ಪಿಡಿಒ ಚಂದ್ರಹಾಸ್ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು
ಕುಣಿಗಲ್ ತಾಲ್ಲೂಕು ಹುಲಿವಾನದಲ್ಲಿ ಸ್ಮಶಾನ ಜಾಗದ ವಿವಾದದ ಹಿನ್ನಲೆಯಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಯಾಗಿದ್ದು, ಪಿಡಿಒ ಚಂದ್ರಹಾಸ್ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು   

ಕುಣಿಗಲ್: ತಾಲ್ಲೂಕಿನ ಹುಲಿವಾನದಲ್ಲಿ ಸ್ಮಶಾನ ಜಾಗದ ವಿವಾದದಿಂದಾಗಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಮಂಗಳವಾರ ಶವವಿಟ್ಟು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಮದ್ಯಪ್ರವೇಶದ ನಂತರ ಅಂತ್ಯಸಂಸ್ಕಾರ ನಡೆಯಿತು.

ಹುಲಿವಾನ ಮುಖ್ಯರಸ್ತೆ ಬಲಭಾಗದಲ್ಲಿ ಎರಡು ಎಕರೆ ಸ್ಮಶಾನವಿದ್ದು, ಗ್ರಾಮಸ್ಥರು ನೂರು ವರ್ಷದಿಂದ ಬಳಸುತ್ತಿದ್ದರು. ಗ್ರಾಮಸ್ಥ ನಂಜೇಗೌಡ ಸ್ಮಶಾನಕ್ಕೆ ಹೊಂದಿಕೊಂಡ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ನಂಜೇಗೌಡ ಮತ್ತು ಕೆಲ ಗ್ರಾಮಸ್ಥರು ಸಾರ್ವಜನಿಕ ಸ್ಮಶಾನದಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಡಿದ ಮನವಿ ಮೇರೆಗೆ ಇತ್ತೀಚೆಗೆ ಅಧಿಕಾರಿಗಳು ಸಾರ್ವಜನಿಕ ಸ್ಮಶಾನಕ್ಕೆ ಎರಡು ಎಕರೆ ಜಮೀನನ್ನು ಮುಖ್ಯರಸ್ತೆಯ ಎಡಭಾಗದಲ್ಲಿ ಮಂಜೂರು ಮಾಡಿ ಸ್ಥಳಾಂತರ ಮಾಡಿದ್ದರು.

ಸೋಮವಾರ ಸಂಜೆ ಗ್ರಾಮದ ವೆಂಕಟೇಶ ಅಲಿಯಾಸ್ ಮಂಜುನಾಥ (45) ಮೃತಪಟ್ಟಿದ್ದು, ಸಂಬಂಧಿಕರು ಮಂಗಳವಾರ ಬೆಳಗ್ಗೆ ಅಂತ್ಯಸಂಸ್ಕಾರಕ್ಕೆಂದು ಹಳೆ ಸ್ಮಶಾನಕ್ಕೆ ಶವ ತಂದಾಗ ನಂಜೇಗೌಡ ಸೇರಿದಂತೆ ಕೆಲವರು ಅಡ್ಡಿಪಡಿಸಿದ್ದಾರೆ. ಆಗ ಗ್ರಾಮಸ್ಥರು ‘ಶತಮಾನಗಳಿಂದ ನಮ್ಮ ಪೂರ್ವಿಕರ ಅಂತ್ಯಸಂಸ್ಕಾರವನ್ನು ಇಲ್ಲಿ ಮಾಡಿದ್ದೇವೆ. ಈಗ ಸ್ಮಶಾನ ಜಾಗ ಬದಲಿ ಮಾಡಿರುವುದು ಖಂಡನೀಯ’ ಎಂದು ಶವವಿಟ್ಟು ಪ್ರತಿಭಟನೆ ನಡೆಸಿದರು.

ADVERTISEMENT

ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ವಿವೇಕ್, ಪಿಡಿಒ ಚಂದ್ರಹಾಸ್ ಮತ್ತು ಕಾನ್‌ಸ್ಟೆಬಲ್‌ ದಯಾನಂದ ಸ್ಥಳಕ್ಕೆ ಭೇಟಿ ನೀಡಿ, ಈಗಾಗಲೇ ಶವ ಹೂಳಲು ಗುಂಡಿ ತೋಡಿರುವುದರಿಂದ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟು, ಮುಂದಿನ ದಿನಗಳಲ್ಲಿ ಸ್ಥಳಾಂತರ ಗೊಂಡಿರುವ ಜಮೀನನಲ್ಲಿ ಮಾಡಲು ಸೂಚಿಸಿ, ವಿವಾದಕ್ಕೆ ಅಂತ್ಯಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.