ADVERTISEMENT

ಕುಣಿಗಲ್: ಸೋಲಿಗೆ ಬೇಸರವಿಲ್ಲ, ಅಭಿವೃದ್ಧಿಗೆ ಬದ್ಧ

ಹೈ–ಟೆಕ್ ಬಸ್ ನಿಲ್ದಾಣಕ್ಕೆ ಭೂಮಿಪೂಜೆ– ಮಾಜಿ ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:17 IST
Last Updated 20 ನವೆಂಬರ್ 2025, 2:17 IST
ಕುಣಿಗಲ್ ಪುರಸಭೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು
ಕುಣಿಗಲ್ ಪುರಸಭೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು   

ಕುಣಿಗಲ್: ಚುನಾವಣೆಯಲ್ಲಿ ಸೋತಿದ್ದರೂ, ಬೇಸರವಿಲ್ಲ, ತಾಲ್ಲೂಕಿನ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಮಾಜಿ ಸಂಸದ (ಬಮುಲ್ ಅಧ್ಯಕ್ಷ) ಡಿ.ಕೆ.ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈ–ಟೆಕ್ ಬಸ್ ನಿಲ್ದಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದವರು ಷಡ್ಯಂತ್ರ ನಡೆಸಿ ಸ್ವಹಿತಾಸಕ್ತಿಗಾಗಿ ಅಭಿವೃದ್ಧಿಗೆ ಅಡ್ಡಿಪಡಿಸಿದ್ದರೂ, ಜಗ್ಗದೆ ಬಸ್ ನಿಲ್ದಾಣ ನಿರ್ಮಾಣಕ್ಕೆ 20 ವರ್ಷಗಳ ಬಳಿಕೆ ಭೂಮಿ ಪೂಜೆ ಮಾಡಲಾಗುತ್ತಿದೆ. 2028ಕ್ಕೆ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ADVERTISEMENT

ತುಮಕೂರು ಜಿಲ್ಲೆ ಸೇರಿದಂತೆ ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವುದು ವೈ.ಕೆ.ರಾಮಯ್ಯ ಅವರ ಕನಸಾಗಿದ್ದು, ನಾಲೆ ನಿರ್ಮಾಣವಾಗಿದ್ದರೂ 30 ವರ್ಷಗಳಿಂದ ತಾಲ್ಲೂಕಿನ ಪಾಲಿನ ನೀರು ಪಡೆಯಲು ರಾಜಕೀಯ ಕುತಂತ್ರದಿಂದ ಸಾಧ್ಯವಾಗಿಲ್ಲ. ನೀರಿನ ವಿಚಾರದಲ್ಲಿ ಅನ್ಯಾಯವಾಗಿದ್ದರೂ ಧ್ವನಿ ಎತ್ತದವರು, ಅನ್ಯಾಯ ಸರಿಪಡಿಸಿ ಲಿಂಕ್ ಕೆನಾಲ್ ನಿರ್ಮಾಣಕ್ಕೆ ಮುಂದಾಗಿರುವಾಗ ಸುಳ್ಳು ಸುದ್ದಿ ಹಬ್ಬಿಸಿ ಅಡ್ಡಿ ಮಾಡುತ್ತಿದ್ದಾರೆ. ಲಿಂಕ್ ಕೆನಾಲ್‌ನಿಂದ ತಾಲ್ಲೂಕಿನ ರೈತರಿಗೆ ಅನುಕೂಲವಾಗುವುದಿರಂದ ಜನರಿಗೆ ನೀಡಿದ ಭರವಸೆಯಂತೆ ಲಿಂಕ್ ಕೆನಾಲ್ ಅನುಷ್ಠಾನ ಖಚಿತ ಎಂದರು.

ಶಾಸಕ ಡಾ.ರಂಗನಾಥ್ ಮಾತನಾಡಿ, ಡಿ.ಕೆ.ಸುರೇಶ್ ಮಾರ್ಗದರ್ಶನದಿಂದ ತಾಲ್ಲೂಕಿನ ಅಭಿವೃದ್ಧಿ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂಚಾರ ದೀಪ, ಒಳ ಚರಂಡಿ, ಅಮೃತಾ– 2 ಯೋಜನೆ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಜತೆಗೆ ಡಿ.ಕೆ.ಎಸ್ ಚಾರಿಟಬಲ್ ಸಂಸ್ಥೆಯಿಂದ ಉಚಿತ ಸಿಇಟಿ ಮತ್ತು ನೀಟ್ ಪರೀಕ್ಷಗಳಿಗೆ ತರಬೇತಿ ನೀಡಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆಸ್ಮಾ ಹಾಗೂ ರಂಗಸ್ವಾಮಿ, ನಾಗೇಂದ್ರ, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.