
ಕುಣಿಗಲ್: ಪಟ್ಟಣದಲ್ಲಿ ಪುರಸಭೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳು ಸ್ಥಗಿತಗೊಂಡಿದ್ದು, ನಾಗರಿಕರು ಪರದಾಡುವಂತಾಗಿದೆ.
ಪುರಸಭೆಯ ವ್ಯಾಪ್ತಿಯಲ್ಲೇ ಹೆಚ್ಚು ಜನಸಂಖ್ಯೆ ಇರುವ 23ನೇ ವಾರ್ಡ್‌ನಲ್ಲಿ ಐದು ವರ್ಷದ ಹಿಂದೆ ₹9 ಲಕ್ಷದ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಇದುವರೆಗೂ ಒಂದು ಹನಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಾರಂಭದಲ್ಲಿ ಬಿಲ್ ಪಾವತಿಗೆ ತಕರಾರು ಇದ್ದರೂ, ನಂತರ ಗುತ್ತಿಗೆದಾರನಿಗೆ ಹಣ ಪಾವತಿಯಾಗಿದ್ದರೂ ನೀರು ಮಾತ್ರ ಪಡೆಯಲು ಸಾಧ್ಯವಾಗಿಲ್ಲ. ಘಟಕ ಬಳ್ಳಿಗಳಿಂದ ಆವೃತವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಸಮರ್ಪಕವಾಗಿರದ ಕಾರಣ ಗುತ್ತಿಗೆದಾರನಿಗೆ ಕಾಮಗಾರಿ ಪೂರ್ಣಗೊಳಿಸಿದ ನಂತರ ಹಣ ಪಾವತಿಗೆ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಬಿಲ್ ಪಾವತಿಸಿದ್ದಾರೆ. ಜತೆಗೆ ದುರಸ್ತಿ ಮಾಡಿಸಲು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪುರಸಭೆ ಸದಸ್ಯೆ ಜಯಮ್ಮ ಆರೋಪಿಸಿದ್ದಾರೆ.
ಪುರಸಭೆಯ 12ನೇ ವಾರ್ಡ್‌ನಲ್ಲಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಆಸ್ಪತ್ರೆಗೆ ಬರುವವರಿಗೆ ಸಮೀಪದ ಅಂದಾನಯ್ಯ ಬಡಾವಣೆ ಮತ್ತು ಪೊಲೀಸ್ ವಸತಿ ಗೃಹಗಳಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿ ಐದು ವರ್ಷವಾದರೂ ಕಾರ್ಯನಿರ್ವಹಿಸಿದ್ದು ಕೆಲವು ತಿಂಗಳು ಮಾತ್ರ. ದುರಸ್ತಿಗೆ ಗಮನ ಹರಿಸದ ಕಾರಣ ನಾಗರಿಕರು ದೂರದ ಘಟಕಗಳಿಗೆ ಹೋಗಿ ನೀರು ತರುವ ಅನಿವಾರ್ಯವಿದೆ.
ಪುರಸಭೆ ಅಧಿಕಾರಿ ವರ್ಗದವರು ಸ್ಥಗಿತಗೊಂಡಿರುವ ಘಟಕಗಳನ್ನು ಕಂಡು ಕಾಣದೆ ಹೋಗುತ್ತಿದ್ದಾರೆ. ಇನ್ನೂ ಪುರಸಭೆಯಿಂದ ವಿತರಣೆಯಾಗುವ ನೀರಿನ ಶುದ್ಧತೆ ಬಗ್ಗೆ ಪ್ರಮಾಣಿಕರಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸದ ಕಾರಣ ನಾಗರಿಕರು ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಗಮನಹರಿಸಲು ಗವಿಯಣ್ಣ ಶ್ರೀಧರ್, ವೆಂಕಟೇಶ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.