ADVERTISEMENT

ಕುಣಿಗಲ್ | ಆಸ್ಪತ್ರೆಯಲ್ಲಿ ವಿದ್ಯುತ್‌ ಸ್ಥಗಿತ: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 2:56 IST
Last Updated 15 ಜುಲೈ 2025, 2:56 IST
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡು ರೋಗಿಗಳು ಪರದಾಡುವಂತಾಯಿತು
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡು ರೋಗಿಗಳು ಪರದಾಡುವಂತಾಯಿತು   

ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ವಿದ್ಯುತ್ ಪರಿವರ್ತಕದ ದೋಷದಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡು ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿ ಪರದಾಡುವಂತಾಯಿತು.

ಶನಿವಾರ ರಾತ್ರಿಯೇ ವಿದ್ಯುತ್ ಪರಿವರ್ತಕ ದೋಷದಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಜನರೇಟರ್ ಮೂಲಕ ವಿದ್ಯುತ್ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಸೋಮವಾರ ಬೆಳಗ್ಗೆ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಉಚಿತ ಡಯಾಲಿಸೀಸ್ ಘಟಕದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಡಯಾಲಿಸೀಸ್ ಬೆಳಗ್ಗೆ ಬಂದವರು ಪರದಾಡುವಂತಾಯಿತು. ತುರುವೇಕೆರೆ ತಾಲ್ಲೂಕು ಗಡಿ ಭಾಗದವರೂ ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಬಂದವರು ಸಕಾಲದಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳಲಾಗದೆ ಉಸಿರಾಟದ ಸಮಸ್ಯೆಯಿಂದ ಬಳಲಿದರೆ, ಕೆಲವರು ಜಿಲ್ಲಾ ಕೇಂದ್ರಕ್ಕೆ ತೆರಳಿದರು.

ADVERTISEMENT

ರೋಗಿಗಳ ಕಡೆಯವರು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಕೆ.ಎಸ್ ಬಲರಾಂ, ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದರೂ ಅಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. 

ಜನರೇಟರ್ ನಿರಂತರವಾಗಿ ಬಳಕೆಯಾದ ಕಾರಣ ಮತ್ತೆ ಮಧ್ಯಾಹ್ನ ಜನರೇಟರ್ ಕೆಟ್ಟು ಸಂಪೂರ್ಣ ವಿದ್ಯುತ್ ವ್ಯವಸ್ಥೆಯೇ ಸ್ಥಗಿತಗೊಂಡಿತು. ನೂರಾರು ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿ ಪರದಾಡಿದರು. ರೋಗಿಗಳ ಸಂಬಂಧಿಗಳು ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದು ವಾಗ್ವಾದ ನಡೆಯಿತು. 

ಆಡಳಿತ ವೈದ್ಯಾಧಿಕಾರಿ ಗಣೇಶಬಾಬು ಬೆಸ್ಕಾಂ ಅಧಿಕಾರಿಗಳ ಮೊರೆ ಹೋದರು. ಸಹಾಯಕ ಎಂಜಿನಿಯರ್ ಸುಧನ್ವಾ ತಂಡ ವಿದ್ಯುತ್ ಪರಿವರ್ತಕ ವ್ಯವಸ್ಥೆ ಮಾಡಿ, ವಿದ್ಯುತ್ ಸರಬರಾಜಿಗೆ ವ್ಯವಸ್ಥೆ ಮಾಡಿದರು.

ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡು ರೋಗಿಗಳು ಪರದಾಡುವಂತಾಯಿತು

ಜನರೇಟರ್ ಬಳಕೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ‘ಆಸ್ಪತ್ರೆಯ ಆವರಣದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟುಹೋಗಿರುವುದರಿಂದ ಸಮಸ್ಯೆಯಾಗಿದೆ. ಜನರೇಟರ್ ಬಳಸಿ ವಿದ್ಯುತ್ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದ್ದರೂ ಮೊದಲ ಮಹಡಿಯಲ್ಲಿರುವ ಡಯಾಲಿಸೀಸ್ ಕೇಂದ್ರಕ್ಕೆ ವಿದ್ಯುತ್ ಸರಬರಾಜಿಗೆ ವ್ಯವಸ್ಥೆಯಾಗದ ಕಾರಣ ಅವ್ಯವಸ್ಥೆಯಾಗಿದೆ. ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.