ADVERTISEMENT

ಕುಣಿಗಲ್ | ಹಾಲು ಉತ್ಪಾದನೆ; ಅವಿರತ ಸಾಧನೆ

ಸತತ ಎರಡು ದಶಕಗಳಿಂದ ತುಮುಲ್‌ಗೆ ಅತಿಹೆಚ್ಚು ಹಾಲು ಪೂರೈಸುತ್ತಿರುವ ಕುಣಿಗಲ್‌ ತಾಲ್ಲೂಕು

ಟಿ.ಎಚ್.ಗುರುಚರಣ್ ಸಿಂಗ್
Published 6 ಅಕ್ಟೋಬರ್ 2025, 2:56 IST
Last Updated 6 ಅಕ್ಟೋಬರ್ 2025, 2:56 IST
ಕುಣಿಗಲ್ ತಾಲ್ಲೂಕಿನ ಬಂಡಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ಹಾಲು ಅಳೆಸುತ್ತಿರುವ ಸದಸ್ಯೆಯರು
ಕುಣಿಗಲ್ ತಾಲ್ಲೂಕಿನ ಬಂಡಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ಹಾಲು ಅಳೆಸುತ್ತಿರುವ ಸದಸ್ಯೆಯರು   

ಕುಣಿಗಲ್: ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ (ತುಮುಲ್‌) ಸತತ 20 ವರ್ಷಗಳಿಂದ ಅತಿ ಹೆಚ್ಚು ಹಾಲು ಉತ್ಪಾದನೆಯಲ್ಲಿ ಕುಣಿಗಲ್ ತಾಲ್ಲೂಕು ಮೊದಲ ಸ್ಥಾನದಲ್ಲಿದೆ.

60ರ ದಶಕದಲ್ಲಿ ರೈತರು ಹಾಲನ್ನು ಕೆಡಿಡಿಸಿಗೆ ಹಾಕುತ್ತಿದ್ದು, ತಾಲ್ಲೂಕಿನಲ್ಲಿ ಸಂಗ್ರಹಣೆಗೆ ಕೇಂದ್ರಗಳಿಲ್ಲದ ಸಮಯದಲ್ಲಿ ಮದ್ದೂರು, ನಾಗಮಂಗಲ ಮತ್ತು ಬೆಳ್ಳೂರು ಕೇಂದ್ರಗಳಿಗೆ ಹಾಲು ಪೂರೈಸುತ್ತಿದ್ದರು. ತುಮುಲ್‌ ಅಸ್ಥಿತ್ವಕ್ಕೆ ಬಂದ ನಂತರ ತಾಲ್ಲೂಕಿನ ಕ್ಷೀರಕ್ರಾಂತಿಗೆ ಮುನ್ನುಡಿಯಾಯಿತು.

ಒಕ್ಕೂಟಕ್ಕೆ ತಾಲ್ಲೂಕಿನಿಂದ ಬೋರೆಗೌಡ ನಿರ್ದೇಶಕರಾಗಿ ಹ್ಯಾಟ್ರಿಕ್ ಬಾರಿಸಿ, ಸಂಘಗಳ ಸ್ಥಾಪನೆಗೆ ಶ್ರಮಿಸಿದ್ದರು. 1997ರಲ್ಲಿ ಆಲಪ್ಪನ ಗುಡ್ಡೆ ಹಾಲು ಉತ್ಪಾದಕರ ಸಂಘ ರಚನೆಗೆ ತೊಡಕುಗಳು ಬಂದರೂ ಧೃತಿಗೆಡೆದೆ ಕೃಷ್ಣಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತುಮುಲ್‌ಗೆ ಸತತ 6ನೇ ಬಾರಿಗೆ ತಾಲ್ಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಕ್ಷೀರಕ್ರಾಂತಿಗೆ ಸಾಕ್ಷಿಯಾಗಿದ್ದಾರೆ.

ADVERTISEMENT

1997ರಲ್ಲಿ ಕೇವಲ17 ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, ಸಾವಿರ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಸದ್ಯ 164 ಸಂಘಗಳಿದ್ದು, 24 ಉಪಕೇಂದ್ರದಲ್ಲಿ 30,459 ನೋಂದಾಯಿತ ಸದಸ್ಯರಿದ್ದಾರೆ. 11,665 ಸದಸ್ಯರು ಹಾಲು ಹಾಕುತ್ತಿದ್ದು, ಪ್ರತಿನಿತ್ಯ 1.6 ಲಕ್ಷ ಲೀಟರ್ ಶೇಖರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಾಲು ಶೇಖರಣೆಯಲ್ಲಿ ದಾಖಲೆಯಾಗಿದೆ. ಗುಣಮಟ್ಟದಲ್ಲೂ ಶೇ 96 ನಿರಂತರವಾಗಿ ದಾಖಲೆ ಮಾಡುತ್ತಿದೆ. 49 ಸಂಘಗಳು ನಿತ್ಯ ಸಾವಿರ ಲೀಟರ್ ಹಾಲು ಶೇಖರಣೆ ಮಾಡುತ್ತಿವೆ. ತಾಲ್ಲೂಕಿನಲ್ಲಿ ಇನ್ನೂ 1.50 ಲಕ್ಷ ಲೀಟರ್ ಹಾಲು ಖಾಸಗಿ ಡೇರಿಗಳಿಗೆ ಸರಬರಾಜಾಗುತ್ತಿದ್ದು, ಖಾಸಗಿಯವರ ಪ್ರಾಬಲ್ಯ ತಡೆದು ಗುಣಮಟ್ಟದ ಹಾಲು ಉತ್ಪಾದನೆಗೆ ಸಂಘದ ಸದಸ್ಯರು ಶ್ರಮಿಸುತ್ತಿದ್ದಾರೆ.

ಒಕ್ಕೂಟದ ಸಹಕಾರದಿಂದ 73 ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. 11 ಸಂಘಗಳು ನಿವೇಶನ ಹೊಂದಿದ್ದು, ಕಟ್ಟಡಗಳು ನಿರ್ಮಾಣವಾಗಬೇಕಿದೆ. 

ತುಮುಲ್ ಮೃತ ಸದಸ್ಯರಿಗೆ ಪರಿಹಾರಧನ, ಗುಣಮಟ್ಟದ ಪಶು ಆಹಾರ, ರಾಸುಗಳಿಗೆ ವಿಮಾ ಯೋಜನೆ, ಕಲ್ಯಾಣ ಟ್ರಸ್ಟ್ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ, ಪ್ರೋತ್ಸಾಹ ಧನ, ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರಗಳನ್ನು ನೀಡುತ್ತಿದ್ದು, ರೈತರು ಹೈನುಗಾರಿಕೆಯ ಲಾಭ ಪಡೆಯಲು ಸಹಕಾರಿಯಾಗಿದೆ.

ಅತ್ಯಾಧುನಿಕ ಶಿಥಿಲೀಕರಣ

ಕೇಂದ್ರ ಪ್ರಾರಂಭಕ್ಕೆ ಕ್ರಮ ತುಮುಲ್ ನಿರ್ದೇಶಕನಾಗಿ ಆಯ್ಕೆಯಾದ ಮೊದಲ ಬಾರಿಗೆ ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದ್ದ ತಾಲ್ಲೂಕಿನ ಚಾಕೇನಹಳ್ಳಿ ಹಾಲು ಶಿಥಿಲೀಕರಣ ಕೇಂದ್ರವನ್ನು ಉಳಿಸಿದ ಪರಿಣಾಮ ಇಂದಿಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 1.60ರಿಂದ 1.75 ಲಕ್ಷ ಹಾಲು ಶೇಖರಣೆಗೆ ಗಮನ ಹರಿಸಲಾಗುತ್ತಿದೆ. ₹20 ಕೋಟಿ ವೆಚ್ಚದಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಶಿಥಿಲೀಕರಣ ಕೇಂದ್ರ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿ.ಕೃಷ್ಣಕುಮಾರ್ ತಿಳಿಸಿದರು.

ನಿತ್ಯ ಹೈನುಗಾರಿಕೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದು ಹಸುಗಳ ಪಾಲನೆ ಪೋಷಣೆ ಜೊತೆಗೆ ನಿತ್ಯ 168 ಲೀಟರ್‌ ಹಾಲು ಪೂರೈಕೆ ಮಾಡಲಾಗುತ್ತಿದೆ. ಹೈನುಗಾರಿಕೆ ತೃಪ್ತಿ ನೀಡಿದೆ.
-ವಿಶಾಲಾಕ್ಷಿ ಟಿ.ಜಿ. ತಿಪ್ಪೂರು 
ಸಂತೆಮಾವತ್ತೂರು ಸಂಘ ತುಮುಲ್ ನಿರ್ದೇಶನದಂತೆ ಕಾರ್ಯನಿರ್ವಹಿಸಿ ಸೌಲಭ್ಯಗಳನ್ನು ಪಡೆದು ತಾಲ್ಲೂಕಿನಲ್ಲಿ ಅತಿಹೆಚ್ಚು ಗುಣಮಟ್ಟದ ಶೇ 96 ಹಾಲು ಸರಬರಾಜು ಮಾಡಿದ ಗೌರವಕ್ಕೆ ಪಾತ್ರವಾಗಿದೆ.
-ರಂಗನಾಥ್ ಸಂತೆಮಾವತ್ತೂರು ಸಂಘ
ಬಂಡಿಹಳ್ಳಿಯಲ್ಲಿ 198 ಸದಸ್ಯರ ಸಹಕಾರದಿಂದ ನಡೆಯುತ್ತಿರುವ ಸಂಘ ಉತ್ತಮ ಮಹಿಳಾ ಸಂಘವಾಗಿ ಸತತ ಐದು ವರ್ಷದಿಂದ ಗೌರವಕ್ಕೆ ಪಾತ್ರವಾಗಿದೆ. ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ.
-ಪ್ರಮೀಳಾ ಬಂಡಿಹಳ್ಳಿ ಸಂಘದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.