ಕಡತ
(ಸಾಂದರ್ಭಿಕ ಚಿತ್ರ)
ಕುಣಿಗಲ್: ಕೆನರಾ ಬ್ಯಾಂಕ್ ಚಲನ್‌ಗಳಿಗೆ ನಕಲಿ ಮೊಹರು ಬಳಸಿ ಪುರಸಭೆ ಆಸ್ತಿ ತೆರಿಗೆ ವಂಚನೆ ಪ್ರಕರಣದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ ಪುರಸಭೆ ಅಧಿಕಾರಿಗಳು ಒಟ್ಟು 43 ಆಸ್ತಿ ಮಾಲೀಕರಿಂದ ₹7.15 ಲಕ್ಷ ತೆರಿಗೆ ವಂಚನೆ ಪತ್ತೆಹಚ್ಚಿ, 9 ಮಾಲೀಕರ ಖಾತೆ ರದ್ದು ಮಾಡಿದ್ದಾರೆ.
ಬ್ಯಾಂಕ್ ಸಿಬ್ಬಂದಿಯೊಂದಿಗೆ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾಹಿತಿ ನೀಡಿರುವ ಮುಖ್ಯಾಧಿಕಾರಿ ಮಂಜುಳಾ, ಕೆನರಾ ಬ್ಯಾಂಕ್ ನಕಲಿ ಮೊಹರು ಬಳಸಿ ತೆರಿಗೆ ವಂಚನೆ ಪ್ರಕರಣ ಬಯಲಿಗೆ ಬಂದ ಕ್ಷಣ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ದಾಖಲೆಗಳ ಪರಿಶೀಲನೆ ಅವಕಾಶ ನೀಡಲಾಗಿದೆ ಎಂದರು.
ಆನ್‌ಲೈನ್ ಪಾವತಿ ಕಡ್ಡಾಯ ಮಾಡಲಾಗಿದೆ. ಆರೋಪಿ ಕೃಷ್ಣ ಅವರಿಂದ ನಕಲಿ ಚಲನ್ ಪಡೆದಿರುವ ಆಸ್ತಿ ಮಾಲೀಕರಿಗೆ ಪುರಸಭೆಗೆ ತೆರಿಗೆ ಪಾವತಿ ಮಾಡಲು ಸೂಚನೆ ನೀಡಲಾಗಿದೆ. ತೆರಿಗೆ ಪಾವತಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ನವರೊಂದಿಗೆ ಚರ್ಚಿಸಿ ಪುರಸಭೆ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಪ್ರಾರಂಭಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಅಧಿಕಾರಿಗಳ ಮೇಲೂ ಕ್ರಮಕ್ಕೆ ಆಗ್ರಹ: ಪುರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆಯಲ್ಲಿ ಕಂದಾಯ ವಿಭಾಗದ ಅಧಿಕಾರಿ ವರ್ಗದ ಲೋಪವಿದ್ದು, ಅವರ ಮೇಲೂ ಕ್ರಮ ತೆಗೆದುಕೊಳ್ಳುವಂತೆ ಕರವೇ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದ್ದಾರೆ. ನಿಯಮಗಳ ಪ್ರಕಾರ ಪುರಸಭೆಯಿಂದ ಆಸ್ತಿ ತೆರಿಗೆ ವಿವರಗಳನ್ನು ಪಡೆದ ನಾಗರಿಕರಿಗೆ ಕೆನರಾ ಬ್ಯಾಂಕ್ ಮೂರು ಮಾದರಿಯ ಚಲನ್ ನೀಡಲಾಗುತ್ತದೆ.
ಚಲನ್ ಮೂಲಕ ಬ್ಯಾಂಕ್ ಕೌಂಟರ್‌ನಲ್ಲಿ ಪುರಸಭೆ ಖಾತೆಗೆ ಹಣ ಪಾವತಿ ಮಾಡಿದಾಗ ಮೂರು ಮಾದರಿಯ ಒಂದು ಭಾಗ ನಾಗರಿಕನಿಗೆ ಮತ್ತೆರಡು ಭಾಗ ಬ್ಯಾಂಕ್ ಮತ್ತು ಪುರಸಭೆಗೆ ಸೇರಬೇಕಾಗಿದೆ. ಈ ಹಂತದಲ್ಲಿ ಬ್ಯಾಂಕ್‌ನಿಂದ ಅಧಿಕೃತ ಮಾಹಿತಿ (ಪಾಸ್ ಶೀಟ್) ಬಂದ ನಂತರವೇ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಧಿಕೃತವಾಗಿ ಖಾತೆದಾರರ ಪಟ್ಟಿಯಲ್ಲಿ ನಮೂದು ಮಾಡಬೇಕು. ಆದರೆ ಸಿಬ್ಬಂದಿಗಳು ಬ್ಯಾಂಕ್ ಮಾಹಿತಿ ಪಡೆಯುವ ಮುನ್ನವೇ ನಾಗರಿಕರೂ ತಂದ ಚಲನ್‌ಗಳನ್ನು ನಮೂದಿಸುವ ವ್ಯವಸ್ಥೆ ಮಾಡಿಕೊಂಡಿದ್ದೇ ಅವ್ಯವಸ್ಥೆಗೆ, ವಂಚನೆಗೆ ದಾರಿಯಾಗಿದೆ ಎಂದರು.
ಲೋಕಾಯುಕ್ತ ತನಿಖೆಗೆ ಆಗ್ರಹ: ಪುರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆ ನಿರಂತರವಾಗಿ ನಡೆಯುತ್ತಿದೆ. 2016ರಿಂದ ಬ್ಯಾಂಕ್ ಖಾತೆಗೆ ಪಾವತಿಸುವ ಆಧುನಿಕ ವ್ಯವಸ್ಥೆ ಜಾರಿಗೆ ಬಂದಿದೆ. ಬ್ಯಾಂಕ್ ಮೂಲಕ ದಾಖಲೆ ಬಂದ ನಂತರವೇ ಅಧಿಕೃತವಾಗಿ ನಮೂದಿಸುವ ವ್ಯವಸ್ಥೆಯನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಮಾಡದ ಕಾರಣ ಆಸ್ತಿ ತೆರಿಗೆ ವಂಚನೆಗೆ ಕಂದಾಯ ವಿಭಾಗದ ಅಧಿಕಾರಿಗಳ ಲೋಪವೇ ಕಾರಣ. ಕೃಷ್ಣ ಅವರ ಮೇಲೆ ಕ್ರಮ ತೆಗೆದುಕೊಂಡಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಸಿಬ್ಬಂದಿ ಮತ್ತು ದಿಕ್ಕು ತಪ್ಪಿಸುತ್ತಿರುವ ಕೆಲ ಸದಸ್ಯರ ಮೇಲೂ ಗಮನ ಹರಿಸಬೇಕಿದೆ ಎಂದು ಸದಸ್ಯ ರಾಮಣ್ಣ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.