ADVERTISEMENT

ಕಲುಷಿತ ನೀರು ಪೂರೈಕೆ: ಜನರ ದೂರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:04 IST
Last Updated 7 ಜನವರಿ 2026, 6:04 IST
ಕುಣಿಗಲ್ 21ನೇ ವಾರ್ಡ್ ಮನೆಯೊಂದರ ನಲ್ಲಿಯಲ್ಲಿ ಬಂದ ಕಲುಷಿತ ನೀರು
ಕುಣಿಗಲ್ 21ನೇ ವಾರ್ಡ್ ಮನೆಯೊಂದರ ನಲ್ಲಿಯಲ್ಲಿ ಬಂದ ಕಲುಷಿತ ನೀರು   

ಕುಣಿಗಲ್: ಪುರಸಭೆಯಿಂದ ಸರಿಯಾಗಿ ಶುದ್ಧಿಕರಿಸದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಟ್ಟಣ ನಿವಾಸಿಗಳು ಆರೋಪಿಸಿದ್ದಾರೆ.

ಪಟ್ಟಣದ ಸಂತೆಮೈದಾನದ ಬಳಿ ನೀರು ಶುದ್ಧಿಕರಣ ಘಟಕದಿಂದ ಪಟ್ಟಣದ ನಾಗರಿಕರಿಗೆ ಶುದ್ಧ ನೀರು ವಿತರಿಸಬೇಕಾಗಿದ್ದು, ಸರಿ ಪ್ರಮಾಣದಲ್ಲಿ ಆಲಂ, ಬ್ಲಿಚಿಂಗ್‌ ಪೌಡರ್, ಕ್ಲೊರಿನ್ ಬಳಸಿ ಶುದ್ಧಿಕರಿಸಿ ವಿತರಣೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದು, ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ದೂರಿದ್ದಾರೆ.

ಪುರಸಭೆಯ 19ರಿಂದ 23 ಮತ್ತು 5, 8ನೇ ವಾರ್ಡ್ ನೀರಿನ ಸಂಪ್‌ಗಳಲ್ಲಿ ಕಲುಷಿತ ನೀರು ಸಂಗ್ರಹವಾಗಿದೆ. ಜನರು ನೀರು ಬಳಸಲು ಆಗದೆ ಹೊರಚೆಲ್ಲುತ್ತಿದ್ದಾರೆ. ಪುರಸಭೆ ನಿರ್ಲಕ್ಷ್ಯದಿಂದಾಗಿ ಸಂಪ್ ಶುಚಿ ಮಾಡುವ ಗುತ್ತಿಗೆದಾರರಿಗೆ ಕೆಲಸ ಹೆಚ್ಚಾಗಿ, ಆರ್ಥಿಕ ಹೊರೆಯಾಗುತ್ತಿದೆ ಎಂದು ಜನರು ದೂರಿದ್ದಾರೆ. 

ADVERTISEMENT

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್ ಮಾತನಾಡಿ, ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಉಪವಿಭಾಗಾಧಿಕಾರಿಗೆ ದೂರು ನೀಡಿದ್ದು, ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ನೀರಿನ ಮಾದರಿ ಸಂಗ್ರಹಿಸಿಕೊಂಡು ಹೋದವರು ಮತ್ತೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಾಸಕರಿಗೆ ಈ ಬಗ್ಗೆ ಗಮನ ಹರಿಸಲು ಮನವಿ ಮಾಡಿದ್ದರೂ ಕುಣಿಗಲ್ ಉತ್ಸವದ ಕಾರ್ಯದಲ್ಲಿರುವ ಶಾಸಕರು ಶುದ್ಧ ಕುಡಿಯವ ನೀರು ವಿತರಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೇ ಸ್ಥಿತಿ ಮುಂದುವರೆದರೆ ಶುದ್ಧಿಕರಣ ಘಟಕದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪುರಸಭೆ ಮಾಜಿ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಪ್ರತಿಕ್ರಿಯಿಸಿ ಕೆ.ಎಲ್.ಹರೀಶ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಶುದ್ಧ ಕುಡಿಯುವ ನೀರು ವಿತರಣೆಗೆ ಗಮನಹರಿಸುವಂತೆ ನಾಗರಿಕರಾದ ಉಮೇಶ್, ಮಹಾಲಕ್ಷ್ಮೀ, ಶ್ರೀನಿವಾಸ್ ಮನವಿ ಮಾಡಿದ್ದಾರೆ.