ADVERTISEMENT

ಕುಣಿಗಲ್ ಉತ್ಸವಕ್ಕೆ ಅದ್ದೂರಿ ಚಾಲನೆ: ಪ್ರತಿ ಮನೆ ಮುಂದೆ ಚಿತ್ತಾಕರ್ಷಕ ರಂಗೋಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:00 IST
Last Updated 10 ಜನವರಿ 2026, 6:00 IST
ಕುಣಿಗಲ್ ಉತ್ಸವದ ಅಂಗವಾಗಿ ತಾಲ್ಲೂಕಿನ 180 ಗ್ರಾಮ ದೇವತೆಗಳ ಉತ್ಸವ ನಡೆಯಿತು
ಕುಣಿಗಲ್ ಉತ್ಸವದ ಅಂಗವಾಗಿ ತಾಲ್ಲೂಕಿನ 180 ಗ್ರಾಮ ದೇವತೆಗಳ ಉತ್ಸವ ನಡೆಯಿತು   

ಕುಣಿಗಲ್: ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಮೂರು ದಿನ ಕುಣಿಗಲ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅಬಾಲವೃದ್ಧರಾಗಿ ಸಾವಿರಾರು ಮಂದಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆದರು.

ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿರುವ ತಿರುಮಲ ತಿರುಪತಿ ಮಾದರಿ ದೇವಾಲಯದ ಮುಂಭಾಗ ಶುಕ್ರವಾರ ಶಾಸಕ ಡಾ.ರಂಗನಾಥ್, ಪತ್ನಿ ಡಾ. ಸುಮಾ ದಂಪತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಸಮಿತಿ ಕರೆ ಮೇರೆಗೆ ಪಟ್ಟಣದ 23 ವಾರ್ಡ್‌ಗಳ ಪ್ರತಿ ಮನೆ ಮುಂದೆ ಮಹಿಳೆಯರು ರಂಗುರಂಗಿನ ಚಿತ್ತಾರದ ರಂಗೋಲಿಗಳನ್ನು ಸಂಭ್ರಮದಿಂದ ಬಿಡಿಸಿದ್ದರು. ಶಾಸಕ ಡಾ.ರಂಗನಾಥ್ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಬಹುಮಾನ ವಿತರಿಸಿದರು. ಸಮಿತಿಯಿಂದ ಪ್ರತಿ ಮನೆಗೂ ಬಹುಮಾನ ವಿತರಿಸಲಾಯಿತು.

ADVERTISEMENT

ತಾಲ್ಲೂಕಿನ ವಿವಿಧೆಡೆಗಳಿಂದ 180 ಗ್ರಾಮ ದೇವತೆಗಳ ಉತ್ಸವಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ಚಾಲನೆ ನೀಡಿದ್ದು, ಪ್ರತಿ ದೇವತೆಗೂ ಶಾಸಕರು ಪುಷ್ಪಾರ್ಚನೆ ಮಾಡಿದರು.

ವೇದಿಕೆ ಮುಂಭಾಗದಲ್ಲಿ ನಡೆದ ವಾಯ್ಸ್‌ ಆಫ್ ಕುಣಿಗಲ್, ಕೊಕ್ಕೊ, ಕಬಡ್ಡಿ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಬ್ರಹ್ಮಾಂಡ ಗುರೂಜಿ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅದು ಸಂಕ್ರಾತಿಯಿಂದ ಯುಗಾದಿವರಗೆ ಮಾತ್ರ. ನಂತರ ಹತ್ತು ವರ್ಷದವರೆಗೂ ಈ ಅವಕಾಶ ಸಿಗುವುದಿಲ್ಲ’ ಎಂದು ಹೇಳಿದರು.

ಕುಣಿಗಲ್ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಶಾಸಕ ಡಾ.ರಂಗನಾಥ ಬಹುಮಾನ ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.