ADVERTISEMENT

ಸೃಜನಶೀಲ ಬರಹಕ್ಕೆ ತಾತ್ವಿಕ ಆಯಾಮ ಕೊಟ್ಟ ಕುವೆಂಪು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:33 IST
Last Updated 1 ಆಗಸ್ಟ್ 2024, 7:33 IST
ತುಮಕೂರು ವಿಶ್ವವಿದ್ಯಾಲಯ ಕುವೆಂಪು ಅಧ್ಯಯನ ಪೀಠ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಯನ ಪೀಠದ ಸಂಯೋಜಕಿ ಗೀತಾ ವಸಂತ, ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು
ತುಮಕೂರು ವಿಶ್ವವಿದ್ಯಾಲಯ ಕುವೆಂಪು ಅಧ್ಯಯನ ಪೀಠ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಯನ ಪೀಠದ ಸಂಯೋಜಕಿ ಗೀತಾ ವಸಂತ, ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು    

ತುಮಕೂರು: ಕುವೆಂಪು ಅವರ ಗದ್ಯ ಪ್ರಕಾರ, ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳ ರಸಾನುಭೂತಿಯನ್ನು ಸಾಹಿತ್ಯದೊಳಗೆ ತಂದು, ಎಷ್ಟು ಸಫಲರಾದರು ಎಂಬ ವಿಚಾರದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಯಲ್ಲಿ ಚರ್ಚಿಸುವ ಅಗತ್ಯವಿದೆ ಎಂದು ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಇಲ್ಲಿ ಬುಧವಾರ ಪ್ರತಿಪಾದಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕುವೆಂಪು ಕಾವ್ಯತತ್ವ’ ಕುರಿತು ಮಾತನಾಡಿದರು.

ತಾತ್ವಿಕ ಆಯಾಮಗಳನ್ನು ಸೃಜನಶೀಲ ಬರಹದಲ್ಲಿ, ಕಥಾ ನಿರೂಪಣೆಯ ತಂತ್ರದಲ್ಲಿ ತೊಡಗಿಸಲು ಕುವೆಂಪು ಪ್ರಯತ್ನಿಸಿದರು ಎಂದು ಅಭಿಪ್ರಾಯಪಟ್ಟರು.

ADVERTISEMENT

20ನೇ ಶತಮಾನದ ಒಂದು ಹೊಸ ಎಚ್ಚರವನ್ನು ಓದುಗರ ಮುಂದಿಟ್ಟು, ಬೌದ್ಧ ಧರ್ಮದ ಪರಿಕಲ್ಪನೆಯನ್ನು ‘ಕಾನೂರು ಹೆಗ್ಗಡತಿ’ ಕಾದಂಬರಿಯಲ್ಲಿ ಧರ್ಮದ ನೈತಿಕ ಆಯ್ಕೆಯ ವಿಚಾರವನ್ನು ಪ್ರತಿಮಾತ್ಮಕವಾಗಿ ಕುವೆಂಪು ಚಿತ್ರಿಸಿದ್ದಾರೆ. ನವ ಸಮುದಾಯದ ಅನ್ವೇಷಣೆಯ, ಆಧುನಿಕ ಸಂದರ್ಭದಲ್ಲಿನ ಸಮುದಾಯದ ಪ್ರಶ್ನೆಯ ಸೂತ್ರಪ್ರಾಯವಾದ ಕೊಂಡಿ ಅವರ ಸಾಹಿತ್ಯದಲ್ಲಿದೆ ಎಂದರು.

ವ್ಯವಸ್ಥೆಯನ್ನು ಬದಲಿಸುವ ಬರವಣಿಗೆಯ ಸಾಮ್ಯತೆಯನ್ನು ಕುವೆಂಪು, ಬೇಂದ್ರೆ ಅವರಲ್ಲಿ ಕಾಣಬಹುದು. ಮೇಲು ಧರ್ಮದ ಬರಹಗಾರರಿಗೆ ಧಾರ್ಮಿಕವಾಗಿ ಬಂದಿರುವ ಕಾವ್ಯತತ್ವ, ಸಿದ್ಧಾಂತಗಳು ನಿರ್ಲಕ್ಷಿತ ಶೂದ್ರ ಸಮುದಾಯದ ಕುವೆಂಪು ಅವರಿಗೆ ಸಿದ್ಧತಿಸಿತ್ತು ಎಂದು ಹೇಳಿದರು.

ಕುವೆಂಪು ಅವರಿಗಿದ್ದ ಮಲೆನಾಡಿನ ಪ್ರಕೃತಿಯ ಅನುಭವ, ಜಾತಿ, ಶಿಕ್ಷಣದ ಮಹತ್ವ, ವರ್ತಮಾನ ಕಾಲದ ಚಿಂತನೆಗಳು ಅವರ ಕಾವ್ಯಗಳಿಗೆ ಪ್ರೇರಣೆಯಾಗಿತ್ತು. ನಿಸರ್ಗದ ಮೇಲೆ ಅಲೌಕಿಕ ಆಯಾಮದ ದೃಷ್ಟಿಯಿತ್ತು ಎಂದು ತಿಳಿಸಿದರು.

ಧರ್ಮ ಮತ್ತು ಧಾರ್ಮಿಕತೆ ನಡುವಿನ ವ್ಯತ್ಯಾಸವನ್ನು ನಿಸರ್ಗ ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿದ್ಧವಾದ ತಾತ್ವಿಕ ಹಿನ್ನೆಲೆ ಇಲ್ಲದಿರುವ ಕಾರಣ ಸಾಹಿತ್ಯದ ಸ್ವಂತ ದೇವರನ್ನು ಸೃಷ್ಟಿಸಿದರು ಎಂದರು.

ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಗೀತಾ ವಸಂತ, ‘ಕುವೆಂಪು ಅವರ ಬದುಕಿನ, ಸಾಹಿತ್ಯದ, ಸಾಮಾಜಿಕ, ಕಾವ್ಯಾತ್ಮಕ ಚಿಂತನಾ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲೇ ಪರಿಚಯಿಸುವ ಸಲುವಾಗಿ ಇಂತಹ ಉಪನ್ಯಾಸಗಳು ಅವಶ್ಯಕ’ ಎಂದು ಹೇಳಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ‘ಕುವೆಂಪು ಸಾಹಿತ್ಯ ಕ್ಷೇತ್ರದ ಆಲದಮರ. ದಲಿತ ಸಾಹಿತ್ಯಕ್ಕೆ ಚಾಲನೆ ಕೊಟ್ಟವರು’ ಎಂದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಲೇಖಕ ಎಸ್.ಪಿ.ಪದ್ಮಪ್ರಸಾದ್, ಕಥೆಗಾರ ಮಿರ್ಜಾ ಬಷೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.