ADVERTISEMENT

ಕೋವಿಡ್ ಆಸ್ಪತ್ರೆಗೆ ಸಿಬ್ಬಂದಿ ಕೊರತೆ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಐಸೊಲೇಷನ್, ಕ್ವಾರಂಟೈನ್‌ಗೆ ಒಳಪಡುವವರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 15:07 IST
Last Updated 11 ಮೇ 2020, 15:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಕೊರೊನಾ ಸೋಂಕು, ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಐಸೊಲೇಷನ್ ಮತ್ತು ಕ್ವಾರಂಟೈನ್‌ಗೆ ಒಳಪಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 7 ಪ್ರಕರಣಗಳು ಸಕ್ರಿಯವಾಗಿವೆ. ಈ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರಲ್ಲಿ ಬಹುತೇಕರನ್ನು ಜಿಲ್ಲಾಸ್ಪತ್ರೆಯ ಐಸೊಲೇಷನ್‌ನಲ್ಲಿ ಇರಿಸಲಾಗಿದೆ.

ಕೊರೊನಾ ಪ್ರಕರಣಗಳಿಗಾಗಿಯೇ ಕೆಲಸ ಮಾಡಲು ಹೆಚ್ಚುವರಿಯಾಗಿ ಶುಶ್ರೂಷಕಿಯರು ಮತ್ತು ‘ಡಿ’ ದರ್ಜೆ ನೌಕರರು ಅಗತ್ಯವಿದ್ದಾರೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಗೆ ಜಿಲ್ಲಾ ಆಸ್ಪತ್ರೆಯಿಂದ ಪ್ರಸ್ತಾವ ಸಹ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಗಮನವಹಿಸಿ ಸಿಬ್ಬಂದಿ ಮಂಜೂರು ಮಾಡಿಸಿದರೆ ಸೋಂಕು ತಡೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತವೆ ಜಿಲ್ಲಾಸ್ಪತ್ರೆಯ ಮೂಲಗಳು.

ADVERTISEMENT

ಕಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 82 ಮಂದಿ ಶುಶ್ರೂಷಕಿಯರು, 100ಕ್ಕೂ ಹೆಚ್ಚು ಮಂದಿ ‘ಡಿ’ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ. ಈಗ 15 ಮಂದಿ ಶುಶ್ರೂಷಕಿಯರು ಮತ್ತು 20 ಮಂದಿ ‘ಡಿ’ ಗ್ರೂಪ್ ನೌಕರರನ್ನು ಹೆಚ್ಚುವರಿಯಾಗಿ ಮಂಜೂರು ಮಾಡುವಂತೆ ಆರೋಗ್ಯ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ.

ಕೊರೊನಾ ವಾರ್ಡ್‌ಗಳಿಗೆ ಶುಶ್ರೂಷಕಿಯರು ಮತ್ತು ‘ಡಿ’ ಗ್ರೂಪ್ ನೌಕರರ ಅಗತ್ಯ ಹೆಚ್ಚಿದೆ. ಔಷಧಿಗಳನ್ನು ತೆಗೆದುಕೊಂಡು ಹೋಗಲು, ಸ್ಕ್ಯಾನಿಂಗ್ ಮತ್ತಿತರ ವೈದ್ಯಕೀಯ ಪರೀಕ್ಷೆಗಳಿಗೆ ಸೋಂಕಿತರನ್ನು ಕರೆದೊಯ್ಯಲು ನೌಕರರು ಅಗತ್ಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಸಿಬ್ಬಂದಿ ನೀಡಿದರೆ ಕೆಲಸಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.