ADVERTISEMENT

ಕೆರೆ ಒತ್ತುವರಿ ಆರೋಪ

ಜಮೀನು ಅಭಿವೃದ್ಧಿ ವೇಳೆ ವಾಹನ ತಡೆದು ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:52 IST
Last Updated 12 ಡಿಸೆಂಬರ್ 2025, 5:52 IST
ಕೊಡಿಗೇನಹಳ್ಳಿ ಹೋಬಳಿ ಮಸರಪಡಿ ಕೆರೆ ಸಮೀಪದ ಜಮೀನಿಗೆ ಮಣ್ಣು ಹೊಡೆಯುತ್ತಿದ್ದ ವಾಹನ ತಡೆದು ಮಹಿಳೆಯರು ಪ್ರತಿಭಟಿಸಿದರು
ಕೊಡಿಗೇನಹಳ್ಳಿ ಹೋಬಳಿ ಮಸರಪಡಿ ಕೆರೆ ಸಮೀಪದ ಜಮೀನಿಗೆ ಮಣ್ಣು ಹೊಡೆಯುತ್ತಿದ್ದ ವಾಹನ ತಡೆದು ಮಹಿಳೆಯರು ಪ್ರತಿಭಟಿಸಿದರು   

ಕೊಡಿಗೇನಹಳ್ಳಿ: ಹೋಬಳಿಯ ಮಸರಪಡಿಯಲ್ಲಿ ಕೆಲ ಪ್ರಭಾವಿಗಳು ಕೆರೆ ಒತ್ತುವರಿ ಜೊತೆಗೆ ಕೆರೆಯಲ್ಲಿನ ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಮಸರಪಡಿ ಹೊರವಲಯದಲ್ಲಿನ ಕೆರೆಯನ್ನು ಬೆಂಗಳೂರಿನ ಕೆಲ ಪ್ರಭಾವಿಗಳು ಸ್ಥಳೀಯರ ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರ ಸಹಕಾರದಿಂದ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ನೂರಾರು ವರ್ಷಗಳಿಂದ ಈ ಕೆರೆಯಲ್ಲಿನ ನೀರನ್ನು ಕೃಷಿ, ದನಕರು, ಕುರಿ-ಮೇಕೆಗೆ ನೀರುಣಿಸಲು ಹಾಗೂ ಮೇವು ತಿನ್ನಲು ಬಳಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಕೆಲವರು ಅರ್ಧ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಮೀನಿಗೆ ಕಲ್ಲು, ಮುಳ್ಳುತಂತಿ ಹಾಕಿಸಿರುವುದಲ್ಲದೇ, ಗ್ರಾಮ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯವರ ಅನುಮತಿ ಪಡೆಯದೆ ಮಸರಪಡಿ ಹಾಗೂ ಸಿಂಗನಹಳ್ಳಿ ಕೆರೆಗಳಲ್ಲಿ ಮಣ್ಣನ್ನು ಹೊಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಅಲುವೇಲಮ್ಮ, ಭಾಗ್ಯಮ್ಮ, ಶಾರದಮ್ಮ, ಆನಂದಮ್ಮ, ಹುಸೇನ್ ಬಿ, ಲಕ್ಷ್ಮಮ್ಮ, ರಂಗಮ್ಮ, ನಾಗಮ್ಮ, ತಿಪ್ಪಮ್ಮ, ರಾಮಾಂಜಪ್ಪ ಹಾಗೂ ಕೆಲ ರೈತ ಸಂಘಟನೆಯವರು ಎಚ್ಚರಿಸಿದ್ದಾರೆ.

‘ನಾನು ಕೆರೆಯಲ್ಲಿನ ಯಾವುದೇ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ. ಅಧಿಕಾರಿಗಳು ಬಂದು ಸ್ಥಳ ತನಿಖೆ ನಡೆಸಿ ಈ ಸ್ಥಳ ಕೆರೆ ಭೂಮಿ ಎಂದರೆ ನಾನು ಯಾವುದೇ ತಕರಾರರಿಲ್ಲದೇ ಭೂಮಿ ಬಿಡಲು ಸಿದ್ಧ’ ಎಂದು  ಭೂಮಾಲೀಕ ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.