
ತುರುವೇಕೆರೆ: ತಾಲ್ಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ಕಾರಣ ಕೆಲವೆಡೆ ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿದೆ.
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಒಬ್ಬೇನಾಗಸಂದ್ರದ ಲಲಿತಮ್ಮ ಅವರ ಮನೆಯ ಗೋಡೆ ಮಳೆಗೆ ಕುಸಿದು, ದವಸ, ದಾನ್ಯ, ಶೀಟ್ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ.
ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ –ಸೊಪ್ಪನಹಳ್ಳಿ ನಡುವಿನ ಕೊಂಡಜ್ಜಿ ಹಳ್ಳ ರಸ್ತೆ ಮೇಲೆ ಹರಿಯುತ್ತಿದೆ. ಐದಾರು ವರ್ಷದ ಹಿಂದೆ ಇದೇ ಜಾಗದಲ್ಲಿ ಹಳ್ಳದಾಟುವಾಗ ಕಾರುಕೊಚ್ಚಿ ಹೋಗಿ ಚಾಲಕ ಸಾವನ್ನಪ್ಪಿದ್ದರೂ ಈವರೆಗೆ ರಸ್ತೆ ಸೇತುವೆ ನಿರ್ಮಾಣವಾಗಿಲ್ಲವೆಂದು ಸ್ಥಳೀಯರೊಬ್ಬರು ಆರೋಪಿಸಿದರು.
ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ನೀರು ರಭಸವಾಗಿ ಹರಿಯುತ್ತಿದೆ. ಇದರ ಸೊಬಗನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಜನರು ಬರುತ್ತಿದ್ದು, ಪೊಲೀಸರು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರಿಗೇಹಳ್ಳಿಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದ್ದು ಈ ಭಾಗಗಳಲ್ಲಿ ರಾತ್ರಿ ಸಂಚರಿಸಲು ವಾಹನ ಸವಾರರು ಹಾಗೂ ಜನರು ಪರದಾಡುವಂತಾಗಿದೆ.
ತುರುವೇಕೆರೆಯ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಹಿನ್ನೀರಿನ ಹರಿವು ರಭಸವಾಗಿರುವ ಕಾರಣ ಮುನಿಯೂರು ಗದ್ದೆ ಬಯಲಿನವರೆಗೆ ನೀರು ಆವರಿಸಿಕೊಂಡಿದೆ. ಪುರ-ತಾಳಕ್ಕೆರೆ ಮತ್ತು ಗೋರಾಘಟ್ಟ-ಡಿ.ಕಲ್ಕೆರೆ ಸಂಪರ್ಕಿಸುವ ಸೇತುವೆ ಮೇಲೆ ಶಿಂಷಾ ನದಿ ನೀರು ಹರಿಯುತ್ತಿದೆ.
ತುರುವೇಕೆರೆ ಕೆರೆ ತುಂಬಿ ಹರಿಯುತ್ತಿರುವ ಕಾರಣ ಸಾಕಷ್ಟು ಜನರು ನಿಂತು ವೀಕ್ಷಿಸಿ ತಮ್ಮ ಮೊಬೈಲ್‌ನಲ್ಲಿ ಕೋಡಿ ನೀರನ್ನು ಸೆರೆ ಹಿಡಿಯುತ್ತಿದ್ದಾರೆ. ತಾಲ್ಲೂಕಿನ ಎನ್‌ಬಿಸಿ ಮತ್ತು ಟಿಬಿಸಿ ಹೇಮಾವತಿ ನಾಲಾ ವ್ಯಾಪ್ತಿಯ 19 ಕೆರೆಗಳು ಮಳೆ ಮತ್ತು ನಾಲಾ ನೀರಿಗೆ ತುಂಬಿ ಕೋಡಿ ಹರಿದಿದೆ.
ತಾಲ್ಲೂಕಿನ ಕೆಲವೆಡೆ ಕೊಳವೆ ಬಾವಿಗಳಲ್ಲಿ ನೀರುಕ್ಕುತ್ತಿವೆ. ಅಲ್ಲಲ್ಲಿ ಅಡಿಕೆ, ತೆಂಗಿನ ಸಾಲು, ಹೊಲ, ಗದ್ದೆ, ಕಟ್ಟೆ ಮತ್ತು ಚೆಕ್ ಡ್ಯಾಂಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.