ADVERTISEMENT

ಮಧುಗಿರಿ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಹೂಳು: ನೀರು ಸಂಗ್ರಹ ಕುಸಿತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 8:32 IST
Last Updated 3 ಜನವರಿ 2026, 8:32 IST
ಮಧುಗಿರಿ ಚೋಳೇನಹಳ್ಳಿ ಕೆರೆ
ಮಧುಗಿರಿ ಚೋಳೇನಹಳ್ಳಿ ಕೆರೆ   

ಮಧುಗಿರಿ: ತಾಲ್ಲೂಕಿನ ಬಹುತೇಕ ಕೆರೆಗಳು ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದು, ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 56, ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ 150ಕ್ಕೂ ಕೆರೆಗಳಿವೆ.

ತಾಲ್ಲೂಕು ಸತತ ಬರಗಾಲ ಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಜನ ಮತ್ತು ಜಾನುವಾರುಗಳು ಮಳೆಯನ್ನೇ ನಂಬಿ ಬದುಕುವಂತಾಗಿದೆ. 

ADVERTISEMENT

ಮಳೆ ಬಂದರೆ ಮಾತ್ರ ಕೆರೆಯಲ್ಲಿ ನೀರು, ಇಲ್ಲದಿದ್ದರೆ ಕೆರೆಯೂ ಒಣಗಿ ಬರಡಾಗುತ್ತದೆ. ಜನ ಮತ್ತು ಜಾನುವಾರುಗಳು ನೀರಿಗಾಗಿ ದೂರದ ಊರುಗಳಿಗೆ ತೆರಳುವಂತಾಗಿದೆ. 

ಮಳೆ ಬಿದ್ದ ನೀರು ಕೆರೆಯಲ್ಲಿ ಶೇಖರಣೆಯಾಗದೆ ಸೀಮಾಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ. ಇದನ್ನು ಶೇಖರಣೆ ಮಾಡಲು ಅಧಿಕಾರಿಗಳು ಯಾವ ಪ್ರಯತ್ನವೂ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡು ಮಳೆಯ ನೀರು ಸಮರ್ಪಕವಾಗಿ ಶೇಖರಣೆಯಾಗುತ್ತಿಲ್ಲ. ಬೇಸಿಗೆ ಬರುವ ಮುನ್ನವೇ ಬಹುತೇಕ ಕೆರೆಗಳಲ್ಲಿ ನೀರು ಕಮರಿಹೋಗುತ್ತವೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ.

ತಾಲ್ಲೂಕಿನ ಕೆರೆಗಳ ಸುತ್ತ ಅನುಪಯುಕ್ತ ಗಿಡಗಳು ಬೆಳೆದಿವೆ. ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಕೆರೆಯನ್ನು ಆವರಿಸಿಕೊಳ್ಳುತ್ತಿದ್ದರೂ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಅನುಪಯುಕ್ತ ಗಿಡಗಳ ಬೇರು ಕೆರೆಯೊಳಗೆ ಇಳಿಯುತ್ತದೆ. ಇಲಿಗಳು ಬಿಲ ತೋಡಿಕೊಂಡು ವಾಸಿಸುವುದರಿಂದ ಕೆರೆಯಲ್ಲಿ ಸಂಗ್ರಹಣೆಯಾದ ನೀರು ಪೋಲಾಗುತ್ತಿದೆ.

ಹೂಳು ಎತ್ತಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾದರೆ ಕೆರೆಯಲ್ಲಿ ಮಳೆ ನೀರು ಹೆಚ್ಚು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗುತ್ತದೆ.  ತಾಲ್ಲೂಕಿನ ಜನರ ಆರ್ಥಿಕ ಅಭಿವೃದ್ಧಿಗೂ ಪೂರಕವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಎತ್ತಿನಹೊಳೆ ಮೂಲಕ ತಾಲ್ಲೂಕಿನ 45 ಕೆರೆಗಳಿಗೆ ನೀರು ಹರಿಸಲು ₹285 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.
- ಕೆ.ಎನ್.ರಾಜಣ್ಣ, ಶಾಸಕ
ತಾಲ್ಲೂಕಿನ ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಇಲ್ಲದಂತಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.
- ದೊಡ್ಡಮಾಳಯ್ಯ, ರೈತ
ಕೆರೆಗಳಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು. ಅಭಿವೃದ್ಧಿಪಡಿಸಿದರೆ ನೀರು ಶೇಖರಣೆಯಾಗಿ ಜನ- ಜಾನುವಾರುಗಳಿಗೆ ಅನುಕೂಲವಾಗುತ್ತದೆ.
- ಮಲ್ಲೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.