ತುಮಕೂರು: ಸರ್ಕಾರಿ ಜಮೀನಿಗೆ ಭೂ ಪರಿವರ್ತನೆ ಮಾಡಿಕೊಟ್ಟಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ ಮಾಡಲು ಕಾರಣಕರ್ತರಾದ ಅಧಿಕಾರಿಗಳು, ನೌಕರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಠಾಣೆಗೆ ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ರಮೇಶ್ ದೂರು ಸಲ್ಲಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಲಪಟಾಯಿಸಿರುವ, ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳು, ಅಕ್ರಮವಾಗಿ ಭೂ ಪರಿವರ್ತನೆ ಮಾಡಿಕೊಟ್ಟಿರುವ ಜಿಲ್ಲಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಹಿನ್ನೆಲೆ: ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ತುಮ್ಮಲು ಗ್ರಾಮದ ಸರ್ವೇ ನಂ. 22ರಲ್ಲಿ 20 ಎಕರೆ 31 ಗುಂಟೆ, ಸರ್ವೇ ನಂ. 40ರಲ್ಲಿ 7 ಎಕರೆ 4 ಗುಂಟೆ ಸರ್ಕಾರಿ ಭೂಮಿ ಇದೆ. ಅದರಲ್ಲಿ ಐ.ಡಿ.ಹಳ್ಳಿ ಹೋಬಳಿಯ ತೊಂಡೋಟಿ ಗ್ರಾಮದ ಟಿ.ಎಸ್.ವಿಶ್ವೇಶ್ವರಶಾಸ್ತ್ರಿ ಹೆಸರಿಗೆ 10 ಎಕರೆ 31 ಗುಂಟೆ, ಬಾನುಪ್ರಕಾಶ್ ಹಾಗೂ ಸತ್ಯಪ್ರಕಾಶ್ ಹೆಸರಿಗೆ ಜಂಟಿಯಾಗಿ 10 ಎಕರೆ ವಿಸ್ತೀರ್ಣದ ಸರ್ಕಾರಿ ಭೂಮಿಯನ್ನು 2006ರಲ್ಲಿ ಖಾತೆ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.
ಅಂದಿನ ಉಪವಿಭಾಗಾಧಿಕಾರಿ ಎಸ್.ಎಲ್.ಮಂಜುನಾಥ್ ಆದೇಶ, ತಹಶೀಲ್ದಾರರಾದ ಸೈಯದ್ ಅಲ್ತಾಫ್ ಅಹಮ್ಮದ್, ಮುನಿಸ್ವಾಮಿ ಸೂಚನೆ ಮೇರೆಗೆ ಅಂದಿನ ಕಂದಾಯ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಅದೇ ರೀತಿಯಾಗಿ ತುಮ್ಮಲು ಗ್ರಾಮದ ಸರ್ವೇ ನಂ. 40ರಲ್ಲಿ ಟಿ.ಎಸ್.ವೆಂಕಟನಾರಾಯಣ ಶಾಸ್ತ್ರಿ, ಟಿ.ಎಸ್.ಕೃಷ್ಣಶಾಸ್ತ್ರಿ ಅವರಿಗೆ ಜಂಟಿಯಾಗಿ 7 ಎಕರೆ 4 ಗುಂಟೆ ಖಾತೆ ಮಾಡಲಾಗಿದೆ. ನಂತರ ಬೆಂಗಳೂರು ಶಿವಾಜಿನಗರದ ಮಹಮದ್ ಇಕ್ಬಾಲ್ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಪನೋಂದಣಾಧಿಕಾರಿ ಯಾವುದೇ ಮೂಲ ದಾಖಲೆ, ನಕ್ಷೆ ಪರಿಶೀಲಿಸದೆ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಜಮೀನು ಖರೀದಿಸಿದ ಮಹಮ್ಮದ್ ಇಕ್ಬಾಲ್ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಚಮ್ಮೇನಹಳ್ಳಿ ಗ್ರಾಮದ ಗೋಪಾಲಗೌಡ ಅವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ. ಅವರಿಂದ 2025 ಜನವರಿ 22ರಂದು ಏಷಿಯನ್ ಪ್ಯಾಬ್ ಟೆಕ್ ಲಿಮಿಟೆಡ್ ನಿರ್ದೇಶಕ ಕೆ.ಪಿ.ಪವನ್ ಜಮೀನು ಖರೀದಿಸಿದ್ದು, ಕುಣಿಗಲ್ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಕ್ರಯಪತ್ರ ಮಾಡಿಕೊಡಲಾಗಿದೆ ಎಂದಿದ್ದಾರೆ.
ಈ ಅಕ್ರಮವನ್ನು ಗಮನಿಸದೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಭಾನುಪ್ರಕಾಶ್, ಮಧುಗಿರಿ ತಹಶೀಲ್ದಾರ್ ಸಿರಿನ್‌ತಾಜ್, ಐ.ಡಿ.ಹಳ್ಳಿ ಕಂದಾಯ ಅಧಿಕಾರಿ ಚಿಕ್ಕರಾಜು ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.