ತುಮಕೂರು: ಅಕ್ರಮವಾಗಿ ಭೂ ಪರಿವರ್ತನೆ ಮಾಡಿಕೊಟ್ಟ ಆರೋಪ ಎದುರಿಸುತ್ತಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಸೀರೆ, ಶಾಲು, ಪೇಟ ನೀಡಿ ಸನ್ಮಾನಿಸಿ ವಿನೂತನವಾಗಿ ಪ್ರತಿಭಟನೆ ನಡೆಸುವ ಪ್ರಯತ್ನವನ್ನು ಪೊಲೀಸರು ತಡೆದರು.
ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ‘ಸರ್ಕಾರದ ಜಮೀನನ್ನು ಭೂ ಪರಿವರ್ತನೆ ಮಾಡಿಕೊಟ್ಟ ಸಾಧಕರು’ ಎಂಬ ಬಿರುದು ನೀಡಿ ಸನ್ಮಾನಿಸುವಂತಹ ಪ್ರತಿಭಟನೆಯನ್ನು ಶುಕ್ರವಾರ ಹಮ್ಮಿಕೊಂಡಿದ್ದರು. ಸನ್ಮಾನಕ್ಕಾಗಿ ಅರಿಸಿನ, ಕುಂಕುಮ, ಬಳೆ, ತಾಂಬೂಲವನ್ನೂ ತಂದಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ. ಕೊನೆಗೆ ಟೌನ್‌ಹಾಲ್ ವೃತ್ತದಲ್ಲೇ ಧರಣಿ ನಡೆಸಿದರು.
ಜಿಲ್ಲಾಧಿಕಾರಿಯನ್ನು ಭೇಟಿಮಾಡಿ ಸನ್ಮಾನಿಸಲು ಅವಕಾಶ ಸಿಗದ ಕಾರಣಕ್ಕೆ ಶುಭ ಕಲ್ಯಾಣ್ ಭಾವಚಿತ್ರಕ್ಕೆ ಸನ್ಮಾನ ಮಾಡಲು ಮುಂದಾದರು. ಆ ಸಮಯದಲ್ಲಿ ಸನ್ಮಾನಕ್ಕೆ ತಂದಿದ್ದ ವಸ್ತುಗಳನ್ನು ಪೊಲೀಸರು ಜಪ್ತಿಮಾಡಿ, ಧರಣಿ ನಿರತರನ್ನು ವಶಕ್ಕೆ ಪಡೆದರು. ಸನ್ಮಾನಕ್ಕೆ ಅವಕಾಶ ನೀಡದ ಪೊಲೀಸರ ಕಾಲಿಗೆ ಬಿದ್ದು, ಅವರ ಪರವಾಗಿಯೂ ಘೋಷಣೆ ಕೂಗಿದರು.
ವಶಕ್ಕೆ ಪಡೆದ ಕಾರ್ಯಕರ್ತರನ್ನು ಬೆಳ್ಳಾವಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲೂ ಪ್ರತಿಭಟನೆ ನಡೆಸಿದರು. ಸಾರ್ವಜನಿಕವಾಗಿ ಜಿಲ್ಲಾಧಿಕಾರಿ ಎಲ್ಲೇ ಸಿಕ್ಕರೂ ಅಲ್ಲೇ ಸನ್ಮಾನ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧು ಸ್ವಾಮಿ ತಿಳಿಸಿದರು.
‘ಅಕ್ರಮ ನಡೆಸಿರುವ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಜಯವಾಗಲಿ’ ಎಂದು ಘೋಷಣೆ ಮೊಳಗಿಸಿದರು. ನಮ್ಮ ಹೋರಾಟ ಸರ್ಕಾರಿ ನೌಕರರು, ಅಧಿಕಾರಿಗಳ ವಿರುದ್ಧವಲ್ಲ. ಲಂಚ ಕೇಳುವ, ಭ್ರಷ್ಟ ನೌಕರರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಯಾವ ಕೆಲಸಕ್ಕೆ ಎಷ್ಟು ಲಂಚ ಕೊಡಬೇಕು ಎಂಬ ಬಗ್ಗೆ ಬೋರ್ಡ್ ಹಾಕಿದರೆ ಅನುಕೂಲವಾಗುತ್ತದೆ. ಮುಂದೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ ತಾಲ್ಲೂಕು ತುಮ್ಮಲು ಗ್ರಾಮದ ವ್ಯಾಪ್ತಿಯಲ್ಲಿ 40 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಭೂ ಪರಿವರ್ತನೆ ಮಾಡಿಕೊಡಲು ನೆರವಾದ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಮುಂದುವರಿದರೆ ಇನ್ನೂ ಎಂತಹ ಅನಾಹುತಗಳನ್ನು ಮಾಡಬಹುದು? ತಮ್ಮ ಇ–ಸಹಿಯನ್ನೇ (ಡಿಜಿಟಲ್ ಸಹಿ) ಭದ್ರವಾಗಿ ಕಾಪಾಡಿಕೊಳ್ಳಲು ಆಗದಿದ್ದರೆ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ? ಇದು ಅವರ ಅದಕ್ಷತೆಯನ್ನು ತೋರಿಸುತ್ತದೆ. ಇಂತಹ ಅಸಮರ್ಥ ಅಧಿಕಾರಿ ಕೈಯಲ್ಲಿ ಜಿಲ್ಲೆ ಇದ್ದರೆ ಮುಂದೆ ಏನೆಲ್ಲ ಅನಾಹುತಗಳು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕಾರಣಿಗಳ ಕೃಪಾಕಟಾಕ್ಷ ಇದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಬೇಕಾಬಿಟ್ಟಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ನೀವು ಮಾಡುತ್ತಿರುವ ಅಕ್ರಮಗಳನ್ನು ನೋಡಿಕೊಂಡು ನಾವು ಸುಮ್ಮನಿರುವುದಿಲ್ಲ. ನಿಮ್ಮನ್ನು ಕಾಯಲು ರಾಜಕಾರಣಿಗಳು ಇರಬಹುದು. ಆದರೆ ನಮ್ಮನ್ನು ಕಾಯಲು ಸಂವಿಧಾನ ಇದೆ ಎಂದು ಎಚ್ಚರಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ರಘು ಜಾಣಗೆರೆ, ಶ್ರೀನಿವಾಸಮೂರ್ತಿ, ಸೋಮಸುಂದರ್, ಆರೋಗ್ಯಸ್ವಾಮಿ, ಜೀವನ್, ರಘುನಂದನ್, ರಂಗನಾಥ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Highlights - null
Cut-off box - ಜಿಲ್ಲಾಧಿಕಾರಿ ಪರ ನಿಂತ ನೌಕರರು ಜಿಲ್ಲಾಧಿಕಾರಿ ಕಚೇರಿ ನೌಕರರು ಶುಭ ಕಲ್ಯಾಣ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಅವರ ಭಾವಚಿತ್ರ ಇರುವ ಬ್ಯಾಡ್ಜ್ ತೊಟ್ಟು ಪ್ರತಿಭಟನೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಚೇರಿಗೆ ನುಗ್ಗುವ ಭಯದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಕಚೇರಿಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಯಿತು. ಜತೆಯಲ್ಲಿ ತಂದಿದ್ದ ಬ್ಯಾಗ್ ಇತರೆ ವಸ್ತುಗಳನ್ನು ಪರಿಶೀಲಿಸಿ ಯಾವುದೇ ವಸ್ತುಗಳು ಇಲ್ಲ ಎಂಬುದು ಖಚಿತಪಡಿಸಿಕೊಂಡ ನಂತರ ಒಳಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.