ADVERTISEMENT

ಬೋರನಕಣಿವೆ: ಬೆಟ್ಟ ಕುಸಿತದ ಆತಂಕ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 7:50 IST
Last Updated 11 ಆಗಸ್ಟ್ 2024, 7:50 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಬಳಿ ಬೆಟ್ಟ ಅಗೆದಿರುವುದು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಬಳಿ ಬೆಟ್ಟ ಅಗೆದಿರುವುದು   

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ಪ್ರದೇಶದಲ್ಲಿ ಮಣ್ಣು ಅಗೆದು ಮನೆ, ದೇವಸ್ಥಾನ ನಿರ್ಮಾಣಕ್ಕೆ ಕೆಲವರು ಮುಂದಾಗಿದ್ದು, ಈ ಭಾಗದಲ್ಲಿ ಬೆಟ್ಟ ಕುಸಿತದ ಭೀತಿ ಎದುರಾಗಿದೆ.

ಎರಡು ಬೆಟ್ಟಗಳ ಮಧ್ಯೆ ಜಲಾಶಯ ನಿರ್ಮಿಸಲಾಗಿದೆ. ಹಸಿರು ಹೊದ್ದು ಮಲಗಿರುವ ಬೆಟ್ಟದ ಸಾಲು ನೋಡುಗರ ಕಣ್ಮನ ಸೆಳೆಯುತ್ತಿದೆ. ಮಳೆಗಾಲದ ಸಮಯದಲ್ಲಿ ಜಲಾಶಯಕ್ಕಿಂತ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಪ್ರತಿದಿನ ಸಾಕಷ್ಟು ಮಂದಿ ವೀಕ್ಷಣೆಗೆ ಬರುತ್ತಿದ್ದು, ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಿದೆ.

ಕುಣಿಗಲ್‌ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ನಂತರ ಬೋರನಕಣಿವೆ ಜಿಲ್ಲೆಯ ಎರಡನೇ ದೊಡ್ಡ ಜಲಾಶಯವಾಗಿದೆ. ಸುಮಾರು 30 ಅಡಿ ಆಳ ಹಾಗೂ ವಿಶಾಲವಾದ ಹಿನ್ನೀರಿನ ಪ್ರದೇಶ ಹೊಂದಿದೆ. ಹಿನ್ನೀರಿನ ಪ್ರದೇಶದಲ್ಲಿ ಕಾರೇಹಳ್ಳಿ ರಂಗನಾಥಸ್ವಾಮಿ ದೇಗುಲವಿದೆ. ಜಲಾಶಯದ ಏರಿ ಮತ್ತು ಕೋಡಿ ನೀರು ಒಂದೇ ಕಡೆ ಹರಿಯುತ್ತದೆ. ಜಲಾಶಯದ ಮುಂಭಾಗವೂ ಉತ್ತಮ ಪರಿಸರವಿದ್ದು, ಎಲ್ಲರ ನೆಚ್ಚಿನ ತಾಣವಾಗಿದೆ.

ADVERTISEMENT

ಇಂತಹ ಸುಂದರ ಬೆಟ್ಟ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರ, ಮನೆ, ರೆಸಾರ್ಟ್‌ ನಿರ್ಮಿಸಲು ಕೆಲವರು ಮುಂದಾಗಿದ್ದಾರೆ. ಈ ಹಿಂದೆ ಜೆಸಿಬಿ ವಾಹನದ ಮುಖಾಂತರ ಬೆಟ್ಟ ಅಗೆಯಲು ಆರಂಭಿಸಿದ್ದರು. ಆಗ ತಹಶೀಲ್ದಾರ್, ಅರಣ್ಯ ಇಲಾಖೆ ಮತ್ತು ತಾಲ್ಲೂಕು ಮಟ್ಟದ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ನಂತರ ಬೆಟ್ಟ ಅಗೆಯುವುದು ನಿಂತಿತ್ತು. ‘ಬೆಟ್ಟ ಅಗೆದಿದ್ದರಿಂದ ಮುಂದಿನ ದಿನಗಳಲ್ಲಿ ಮಳೆ ಜಾಸ್ತಿಯಾದರೆ ಕುಸಿತ ಉಂಟಾಗಿ ಜಲಾಶಯ, ಜನವಸತಿ ಪ್ರದೇಶಕ್ಕೆ ಹಾನಿಯಾಗಬಹುದು’ ಎಂಬುವುದು ಇಲ್ಲಿನ ಜನರ ಆತಂಕ.

ಈಗಾಗಲೇ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೇರಳದ ವಯನಾಡು ಭಾಗದಲ್ಲಿ ಗುಡ್ಡ ಕುಸಿತದಿಂದ ಅಪಾರ ಹಾನಿಯಾಗಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಘಟನೆ ಕಂಡ ನಂತರವೂ ಜನ, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ‘ಸ್ವಾರ್ಥ, ಸ್ವಹಿತಾಸಕ್ತಿಗಾಗಿ ಪ್ರಕೃತಿಗೆ ಹಾನಿ ಮಾಡುತ್ತಿದ್ದಾರೆ’ ಎಂದು ಬೋರನಕಣಿವೆ ಜಲಾಶಯ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಬೆಟ್ಟ ಅಗೆದ ಪ್ರದೇಶದಲ್ಲಿ ಗಿಡ ನೆಟ್ಟು ಪೋಷಿಸಬೇಕು, ಅರಣ್ಯ ರಕ್ಷಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳು ನಡೆಯದಂತೆ ಕ್ರಮ ವಹಿಸಬೇಕು. ಬೆಟ್ಟಕ್ಕೆ ಹಾನಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದೂ ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.