
ತುಮಕೂರಿನಲ್ಲಿ ಶನಿವಾರ ಕನ್ನಡ ಕಲಿಕಾ ಕೇಂದ್ರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ತುಮಕೂರು: ಅಲ್ಪಸಂಖ್ಯಾತರು, ಇತರೆ ಭಾಷೆಯವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ 45 ಕಡೆ ಕನ್ನಡ ಕಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ನಗರದ ಅಲಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈವರೆಗೆ ರಾಜ್ಯದಲ್ಲಿ 40 ಕಡೆಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷರಾದ ಮೇಲೆ ಕೇವಲ ಮೂರು ತಿಂಗಳಲ್ಲಿ ಕನ್ನಡವನ್ನು ಸರಳವಾಗಿ ಕಲಿಯುವ ಪುಸ್ತಕ ರಚಿಸಲಾಗಿದೆ. ಈ ಪುಸ್ತಕದ ಮೂಲಕ ಕನ್ನಡ ಕಲಿಯುವುದು ಸರಳವಾಗಿದೆ ಎಂದರು.
ಕನ್ನಡ ಸಾಹಿತ್ಯ ಬರೆಯುವ ಲೇಖಕರಲ್ಲಿ 890 ಮಂದಿ ಮುಸ್ಲಿಮ್ ಸಾಹಿತಿಗಳಿದ್ದಾರೆ. ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ವ್ಯತ್ಯಾಸ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕನ್ನಡ ಭಾಷೆ ಕಲಿಯುವ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಪರಿಷತ್ತು ವತಿಯಿಂದ ಕಲಿಕಾ ಕೇಂದ್ರಕ್ಕೆ ಬೇಕಾಗುವ ಪರಿಕರ ಒದಗಿಸಲಾಗುವುದು. ಅಲ್ಪಸಂಖ್ಯಾತರು ಸಹ ಕನ್ನಡ ಕಲಿಯಬೇಕು’ ಎಂದು ಹೇಳಿದರು.
ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ಲ, ಕಾಲೇಜು ಪ್ರಾಂಶುಪಾಲ ಶೇಕ್ ಮೊಹಮ್ಮದ್ ಅನ್ವರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಸಂಸ್ಥೆ ಕಾರ್ಯದರ್ಶಿ ಮಿರ್ಜಾ ಅಸ್ಲಂ ಪಾಷ, ಅಧ್ಯಕ್ಷ ಅಬ್ದುಲ್ ರೆಹಮಾನ್, ಮದರಸಾ ಮುಖ್ಯಸ್ಥ ಮುಫ್ತಿತೌಹಿದ್ ಉರ್ ರೆಹಮಾನ್, ಶಾಹೀದ್ ಅಫ್ರಿದಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.