ADVERTISEMENT

ಪೊಲೀಸರಿಗೆ ಯಾಕಿಷ್ಟು ಉದಾಸೀನತೆ?

ಅಧಿಕಾರಿಗಳಿಗೆ ಮುಖಂಡರ ತರಾಟೆ; ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಮುಖಂಡರು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 3:10 IST
Last Updated 5 ಜುಲೈ 2025, 3:10 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು   

ತುಮಕೂರು: ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಪ್ರಕರಣ ದಾಖಲಾದರೂ ಅವರನ್ನು ಯಾಕೆ ಬಂಧಿಸಿಲ್ಲ? ಯಾವ ಕಾಲದಲ್ಲಿದ್ದೇವೆ ನಾವು? ಅಧಿಕಾರಿಗಳು ಯಾಕೆ ಸಭೆಗೆ ಬರುವುದಿಲ್ಲ? ಇದು ಕೇವಲ ನಾಮಕಾವಸ್ತೆ ಸಭೆಯೇ?

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಸಮುದಾಯದ ಮುಖಂಡರು ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎ.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಗೋಪಾಲ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಕೃಷ್ಣಪ್ಪ ಯಾವುದಕ್ಕೂ ಉತ್ತರಿಸದೆ ಮೌನ ವಹಿಸಿದ್ದರು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು.

ADVERTISEMENT

ಘಟನೆ ನಂತರ ಸಂತ್ರಸ್ತರನ್ನು ಭೇಟಿಯಾಗಲು ಪೊಲೀಸರು ನಮಗೆ ಅವಕಾಶ ಕೊಡುವುದಿಲ್ಲ. ಪ್ರಕರಣದ ಬಗ್ಗೆ ಮಾಹಿತಿಯನ್ನೂ ನೀಡುವುದಿಲ್ಲ. ಇಂತಹ ಸಭೆಗಳಿಗೂ ಡಿವೈಎಸ್‌ಪಿ, ಇತರೆ ಅಧಿಕಾರಿಗಳು ಗೈರಾಗುತ್ತಾರೆ. ಸಭೆಗೆ ಬಂದವರ ಬಳಿ ಸಮರ್ಪಕ ವಿವರ ಇರುವುದಿಲ್ಲ. ಪೊಲೀಸ್‌ ಅಧಿಕಾರಿಗಳಿಗೆ ಯಾಕಿಷ್ಟು ಉದಾಸೀನತೆ. ಅಗತ್ಯ ವಿವರ ಪಡೆಯಲು ಇನ್ನು ಮೂರು ತಿಂಗಳು ಕಾಯಬೇಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಂಬತ್ತನಹಳ್ಳಿಯಲ್ಲಿ ಅಲೆಮಾರಿ ಸಮುದಾಯದ ಜನ ನೆಲೆಸಿದ್ದರು. ಸ್ನಾನಕ್ಕೆ ಸರಿಯಾದ ಶೌಚಾಲಯ ಇರಲಿಲ್ಲ. ಊರಾಚೆ ಶೆಡ್‌ ಹಾಕಿಕೊಂಡು ಬದುಕುತ್ತಿದ್ದವರನ್ನು ಅಲ್ಲಿಂದ ಒಕ್ಕಲೆಬ್ಬಿಸಿದರು. ಅವರಿಗೆ ಒಂದೆಡೆ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್‌, ‘ಸಭೆಯಲ್ಲಿ ಚರ್ಚೆಗೆ ಬಂದ ಎಲ್ಲ ಪ್ರಕರಣ ಗಮನಿಸಿದ್ದೇವೆ. ಮುಂದಿ‌ನ ಸಭೆಯಲ್ಲಿ ಎಲ್ಲ ರೀತಿಯ ಮಾಹಿತಿ, ದಾಖಲೆ ಜತೆಗೆ ಹಾಜರಾಗುತ್ತೇವೆ’ ಎಂದು ಮುಖಂಡರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

‘ಕ್ರಮ ವಹಿಸಲಾಗಿದೆ, ಆದೇಶಿಸಲಾಗಿದೆ ಎಂಬುದು ಬಿಟ್ಟರೆ ನಿಮ್ಮಿಂದ ಬೇರೆ ಉತ್ತರ ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಮ ಏನಾಗಿದೆ ಎಂಬುವುದನ್ನು ಯಾರೊಬ್ಬರೂ ಹೇಳಲ್ಲ. ಹೀಗಾದರೆ ಪ್ರಕರಣ ವಿಲೇವಾರಿಯಾಗುವುದು ಯಾವಾಗ? ಎಂದು ಅಧಿಕಾರಿಗಳನ್ನು ಮುಖಂಡರು ತರಾಟೆಗೆ ತೆಗೆದುಕೊಂಡರು.

ಜಿ.ಪಂ ಉಪಕಾರ್ಯದರ್ಶಿ ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಇತರರು ಹಾಜರಿದ್ದರು.

ಭೂಮಿ ಮಾರಾಟ!

ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಹಂಚಿಕೆಯಾದ ಭೂಮಿಯನ್ನು ಫಲಾನುಭವಿಗಳು ಮಾರಾಟ ಮಾಡಿಕೊಂಡಿದ್ದಾರೆ. ಮಾರಾಟಕ್ಕೆ ಅವಕಾಶ ಇಲ್ಲದಿದ್ದರೂ ಅಧಿಕಾರಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಕಳೆದ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿತ್ತು. ಇದುವರೆಗೆ ಏನು ಕ್ರಮ ಆಗಿದೆ ಎಂದು ಮುಖಂಡ ದಲಿತ್‌ ನಾರಾಯಣ್‌ ಪ್ರಶ್ನಿಸಿದರು. ನಿಗಮದ ಜಿಲ್ಲಾ ಅಧಿಕಾರಿ ಸಭೆಗೆ ಗೈರಾಗಿದ್ದರು. ಸಿಬ್ಬಂದಿ ಬಳಿಯೂ ಸಮರ್ಪಕ ಮಾಹಿತಿ ಇರಲಿಲ್ಲ. ಇದರಿಂದ ಮುಖಂಡರು ಸಿಡಿಮಿಡಿಗೊಂಡರು. ಯಾವ ಅಧಿಕಾರಿಯೂ ಸಭೆಗೆ ಬರುವುದಿಲ್ಲ. ಅಂತಹವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಳೆದ ಸಭೆಗೆ ಬಾರದವರ ಮೇಲೆ ಯಾವ ಕ್ರಮ ವಹಿಸಲಾಗಿದೆ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಸಹಿತ ಎಲ್ಲರೂ ಮೌನವಾಗಿದ್ದರು.

- ಕುಂದು ಕೊರತೆ ಸಭೆ ಕಡ್ಡಾಯ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಕುಂದು ಕೊರತೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸೂಚಿಸಿದರು. ಜಿಲ್ಲೆಯಲ್ಲಿ ಇದುವರೆಗೆ ಪರಿಶಿಷ್ಟ ಸಮುದಾಯಕ್ಕೆ ಸಂಬಂಧಿಸಿದಂತೆ 403 ದೌರ್ಜನ್ಯ ಮತ್ತು 20 ಪೋಕ್ಸೊ ಪ್ರಕರಣ ಬಾಕಿ ಇವೆ. ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್‌ ಜಗಜೀವನರಾಂ ಭವನ ಉದ್ಯಾನವನ ನಿರ್ಮಿಸಲು ಸ್ಥಳ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.