ADVERTISEMENT

ರೈತರ ರಕ್ಷಣೆಗೆ ಋಣಮುಕ್ತ ಕಾಯ್ದೆ ಜಾರಿ ಮಾಡಲಿ

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:45 IST
Last Updated 4 ಆಗಸ್ಟ್ 2019, 19:45 IST
ಋಣಮುಕ್ತ ಕಾಯ್ದೆ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ವೇಳೆ ಸಿ.ಯತಿರಾಜ್ ಮಾತನಾಡಿದರು
ಋಣಮುಕ್ತ ಕಾಯ್ದೆ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ವೇಳೆ ಸಿ.ಯತಿರಾಜ್ ಮಾತನಾಡಿದರು   

ತುಮಕೂರು: ‘ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇ 50ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾನೂನು ಹಾಗೂ ಎಲ್ಲ ರೈತ- ಕೃಷಿ ಕೂಲಿಕಾರರಿಗೆ ಅಗತ್ಯವಿರುವ ಬ್ಯಾಂಕ್ ಸಾಲ ನೀಡಿಕೆ, ಸಾಲಮನ್ನ ಇತ್ಯಾದಿ ಅಂಶಗಳಿಗೆ ಸಂಬಂಧಿಸಿದಂತೆ ‘ಋಣಮುಕ್ತ ಕಾಯ್ದೆ’ಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು’ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಯದರ್ಶಿ ಸಿ.ಯತಿರಾಜ್ ಒತ್ತಾಯಿಸಿದರು.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.

‘ಡಾ.ಸ್ವಾಮಿನಾಥನ್ ವರದಿಯನ್ವಯ ಶಾಸನ ರೂಪಿಸಬೇಕು. ವಿಶೇಷ ಸಂದರ್ಭದಲ್ಲಿ ಬಡ್ಡಿ ಮನ್ನಾ, ಸಾಲಮನ್ನಾ ಇತ್ಯಾದಿ ಅಂಶಗಳನ್ನು ಇತ್ಯರ್ಥಪಡಿಸಬೇಕು’ ಎಂದರು.

ADVERTISEMENT

‘ಹಿಂದಿನ ರೈತರ ಹೋರಾಟದ ಫಲದಿಂದ ರೈತರ ಖಾತೆಗೆ ₹ 6 ಸಾವಿರ ನೀಡುವುದಾಗಿ ಮತ್ತೆ ಭರವಸೆ ನೀಡಿ ಬಿಜೆಪಿ ಅಧಿಕಾರ ಹಿಡಿದಿದೆ. ಇದು ರೈತರ ಸಂಪೂರ್ಣ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಏನೇನೂ ಸಾಲದು. ಆದ್ದರಿಂದ ಸ್ವಾಮಿನಾಥನ್ ವರದಿಯನ್ನು ವಿಶೇಷ ಅಧಿವೇಶನ ನಡೆಸಿ ಅಂಗೀಕರಿಸಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಮುಖಂಡ ರವೀಶ್ ಮಾತನಾಡಿ, ‘ಭರವಸೆಗಳು ಮಾತ್ರ ರೈತರ ಬದುಕನ್ನು ರಕ್ಷಿಸುವುದಿಲ್ಲ. ರೈತರ ನಿಜವಾದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಬೇಕು’ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ‘ಬರಗಾಲ, ನೀರಾವರಿ ಯೋಜನೆಗಳಿಲ್ಲದೆ ರೈತರ ಬದುಕು ದುಸ್ಥಿತಿಗೆ ಇಳಿದಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ರೈತರ ಬೆಳೆಗೆ ಉತ್ತಮ ಬೆಲೆ, ಜಿಲ್ಲೆಗೆ ನೀರಾವರಿ ಯೋಜನೆ ಜಾರಿ ಮಾಡಬೇಕು’ ಎಂದರು.

ಎಐಕೆಎಸ್ ಶಶಿಕಾಂತ್ ಮಾತನಾಡಿ, ‘ರೈತರ ನಿರಂತರ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಹೆಚ್ಚಿನ ಜವಾಬ್ದಾರಿ ತೋರುತ್ತಿಲ್ಲ. ರೈತ ವಿರೋಧಿ ನೀತಿಯನ್ನು ತೋರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಕೆಎಸ್‌ಸಿಸಿ ಸಂಚಾಲಕ ಬಿ.ಉಮೇಶ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಮಾತಿನ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದು, ಆಡಳಿತಾವಧಿಯಲ್ಲಿ ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗ ಜಾರಿಗೆ ತಂದಿದ್ದಾರೆ. ಅಂಕಿ ಅಂಶಗಳನ್ನು ನೀಡುವ ನೀತಿ ಆಯೋಗದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದೊಡ್ಡನಂಜಪ್ಪ, ಶಂಕರಲಿಂಗಯ್ಯ, ರೈತ ಸಂಘದ ಮುಖಂಡ ಪುಟ್ಟಸ್ವಾಮಿ, ಕೃಷಿಕೂಲಿಕಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.