ತುಮಕೂರು: ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಕನ್ನಡ ಪದ ಹಾಡೋಣ... ಕನ್ನಡ ಪದ ಕೇಳೋಣ’... ಕಾರ್ಯಕ್ರಮವನ್ನು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀಸಾಯಿರಾಮ ನೃತ್ಯ ಕೇಂದ್ರದ ರತಿಕಾ ಸಾಗರ್ ಅವರಿಂದ ಸುಗ್ಗಿ ಸಂಭ್ರಮ ನೃತ್ಯ, ದಿಶಾ ಜೈನ್, ಅಶ್ವಿನಿ ತಂಡದಿಂದ ಸುಗಮ ಸಂಗೀತ, ಮಧುಗಿರಿ ತಾಲ್ಲೂಕು ಮಲ್ಲನಾಯಕನಹಳ್ಳಿ ದ್ಯಾವರಪ್ಪ ಬಳಗದಿಂದ ತತ್ವಪದ, ಗಾಯಕಿ ಮೀರಾ ಕೇಶವರಾಜ್ ಅವರಿಂದ ಜನಪದ ಗಾಯನ, ಲಕ್ಷ್ಮಣದಾಸ್ ಅವರಿಂದ ರಂಗಗೀತೆ, ವೀರೇಂದ್ರ ತಂಬಾಡಿ ಅವರಿಂದ ಮ್ಯಾಂಡೋಲಿನ್ ವಾದನ, ಕೇಶವರಾಜ್ ಅವರಿಂದ ಕೊಳಲು ವಾದನ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹರಿಕಥಾ ವಿದ್ವಾನ್ ಲಕ್ಷ್ಮಣ್‌ದಾಸ್, ‘ಯುವಜನರು ಸಂಗೀತ, ಸಾಹಿತ್ಯ ನುಡಿಗಳನ್ನು ಕೇಳಬೇಕು. ಸ್ಮೃತಿ ಪಟಲದ ಮೇಲೆ ಇಂತಹ ನುಡಿಗಳು ಬಿದ್ದರೆ ಹೆಚ್ಚು ದಿನ ಉಳಿಯುವುದರಿಂದ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಅನನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎ.ವಿಶ್ವನಾಥ್, ‘ಇತ್ತೀಚಿನ ದಿನಗಳಲ್ಲಿ ಸತ್ವವಿಲ್ಲದ ಹಾಡುಗಳು, ಅಬ್ಬರದ ಸಂಗೀತಕ್ಕಿಂತ ನಮ್ಮ ಜನಪದರ ಹಾಡುಗಳು ಸಾವಿರ ಪಟ್ಟು ಮೇಲು. ಜನಪದಕ್ಕೆ ಹೇಗೆ ಮಾರುಕಟ್ಟೆ ಸ್ವರೂಪ ನೀಡಬಹುದು ಎಂಬ ಬಗ್ಗೆ ಯುವ ಸಮೂಹ ಚಿಂತಿಸಬೇಕು’ ಎಂದು ಸಲಹೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸ್ವರಸಿಂಚನ ಸುಗಮ ಸಂಗಿತ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಕೆಂಕೆರೆ, ಅನನ್ಯ ಸಂಸ್ಥೆ ಉಪಾಧ್ಯಕ್ಷ ಬಿ.ಆರ್.ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪ್ರಮುಖರಾದ ಸಾ.ಚಿ.ರಾಜಕುಮಾರ್, ಸಿ.ಸಿ.ಪಾವಟೆ, ರಕ್ಷಿತ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.