ADVERTISEMENT

ಗುಬ್ಬಿ: ಗ್ರಂಥಾಲಯ ಜ್ಞಾನ ಭಂಡಾರದ ನಿಧಿ

ಗ್ರಂಥಪಾಲಕರ ದಿನಾಚರಣೆ, ಪುಸ್ತಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:03 IST
Last Updated 13 ಆಗಸ್ಟ್ 2021, 4:03 IST
ಗುಬ್ಬಿಯಲ್ಲಿ ನಡೆದ ಗ್ರಂಥಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಂಥಪಾಲಕರಾದ ರಾಜಲಕ್ಷ್ಮಿ, ನಾಗರತ್ನ ಹಾಗೂ ಓದುಗರು
ಗುಬ್ಬಿಯಲ್ಲಿ ನಡೆದ ಗ್ರಂಥಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಂಥಪಾಲಕರಾದ ರಾಜಲಕ್ಷ್ಮಿ, ನಾಗರತ್ನ ಹಾಗೂ ಓದುಗರು   

ಗುಬ್ಬಿ: ಒಳ್ಳೆಯ ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಅಂತಹ ಪುಸ್ತಕಗಳು ಇರುವ ಗ್ರಂಥಾಲಯಗಳು ಜ್ಞಾನ ಭಂಡಾರದ ನಿಧಿಯಂತೆ. ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗ್ರಂಥಪಾಲಕಿ ರಾಜಲಕ್ಷ್ಮಿ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ಗ್ರಂಥಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಂಥಾಲಯ ಪಿತಾಮಹ ಡಾ.ಎಸ್‌.ಆರ್. ರಂಗನಾಥ್ ರವರ ಜನ್ಮ ದಿನಾಚರಣೆಯನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗ್ರಂಥಾಲಯ ವಿಜ್ಞಾನಕ್ಕೆ ಹೆಚ್ಚು ಮನ್ನಣೆ ತಂದುಕೊಟ್ಟವರು ರಂಗನಾಥ್. ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಗ್ರಂಥಾಲಯಗಳು ಡಿಜಿಟಲೀಕರಣಗೊಳ್ಳುತ್ತಿವೆ. ಬೆರಳ ತುದಿಯಲ್ಲಿಯೇ ಪುಸ್ತಕಗಳನ್ನು ಓದಿ ಮಾಹಿತಿ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.

ADVERTISEMENT

ಎಲ್ಲ ವಿಧದ ಪುಸ್ತಕಗಳು ಒಂದೆಡೆ ಲಭ್ಯವಾಗುವುದರಿಂದ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಅನುಕೂಲಕರ. ಕೋವಿಡ್‌ನಿಂದಾಗಿ ಓದುಗರು ಗ್ರಂಥಾಲಯಕ್ಕೆ ಬರುವುದು ಕಡಿಮೆಯಾಗಿದ್ದರೂ, ಗ್ರಂಥಾಲಯ ತನ್ನ ಮೌಲ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಸದಾಶಿವಯ್ಯ ಮಾತನಾಡಿ, ಅರಿವು ಹೆಚ್ಚಾದಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಿವೃತ್ತರು, ಹಿರಿಯ ನಾಗರಿಕರು,ಹೆಚ್ಚಿನ ಸಮಯವನ್ನುಗ್ರಂಥಾಲಯದಲ್ಲಿ ಕಳೆಯುತ್ತಾ, ಉತ್ತಮ ಪುಸ್ತಕಗಳ ಓದಿನಿಂದ ಹೆಚ್ಚಿನ ಜ್ಞಾನಾರ್ಜನೆ ಸಾಧ್ಯವಾಗುತ್ತದೆ. ಒಳ್ಳೆಯ ಅನುಭವ ಪಡೆದುಕೊಳ್ಳಲು ನೆರವಾಗುತ್ತದೆಎಂದರು.

ಉತ್ತಮ ಪುಸ್ತಕಗಳು ಅಜ್ಞಾನದ ಅಂಧಕಾರ ಹೋಗಲಾಡಿಸಿ, ಜ್ಞಾನದ ಬೆಳಕು ಪಡೆಯಲು ಮಾರ್ಗದರ್ಶನ ನೀಡುತ್ತವೆ. ಉದ್ಯೋಗಕ್ಕಾಗಿ ಓದುವುದಕ್ಕಿಂತ ಉತ್ತಮ ಬದುಕು ಕಟ್ಟಿಕೊಳ್ಳಲು ಓದಿನ ಅಗತ್ಯವಿದೆ ಎಂದು ಹೇಳಿದರು.

ಗ್ರಂಥಪಾಲಕಿ ನಾಗರತ್ನ ಮಾತನಾಡಿ, ಗುಬ್ಬಿ ಗ್ರಂಥಾಲಯದಲ್ಲಿ ವಿವಿಧ ಬಗೆಯ 51,171 ಪುಸ್ತಕಗಳು ಓದುಗರಿಗೆ ಲಭ್ಯವಿದೆ. ಅದರಲ್ಲಿ ಸ್ಪರ್ಧಾತ್ಮಕ ವಿಷಯಗಳ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅನೇಕ ಸಂಶೋಧನಾ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು.

ಗ್ರಂಥಾಲಯ ಸಹಾಯಕ ರಾಮು, ಓದುಗರಾದ ಪಾಲನೇತ್ರ, ಪರಮಶಿವಯ್ಯ, ಶಿವಕುಮಾರ್, ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.