ADVERTISEMENT

ತುಮಕೂರು| ಡಿಜಿಟಲ್‌ ಗ್ರಂಥಾಲಯದ ಸರ್ವರ್‌ ಡೌನ್‌

ಸ್ಮಾರ್ಟ್‌ ಸಿಟಿ ಗ್ರಂಥಾಲಯದಲ್ಲಿ ತಾಂತ್ರಿಕ ದೋಷ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:29 IST
Last Updated 18 ಜೂನ್ 2019, 20:29 IST
ತುಮಕೂರು ಡಿಜಿಟಲ್‌ ಗ್ರಂಥಾಲಯದ ನೋಟ
ತುಮಕೂರು ಡಿಜಿಟಲ್‌ ಗ್ರಂಥಾಲಯದ ನೋಟ   

ತುಮಕೂರು: ಒಂದೂವರೆ ಕೋಟಿ ಖರ್ಚು ಮಾಡಿ ರೂಪಿಸಿರುವ ‘ತುಮಕೂರು ಡಿಜಿಟಲ್‌ ಗ್ರಂಥಾಲಯ’ದ ಸರ್ವರ್‌ ಆಗಾಗ್ಗೆ ಡೌನ್‌ ಆಗುತ್ತಿದೆ! ಆಸಕ್ತರು ಆನ್‌ಲೈನ್‌ನಲ್ಲಿ ಪತ್ರಿಕೆ, ನಿಯತಕಾಲಿಕೆ ಮತ್ತು ಪುಸ್ತಕಗಳನ್ನು ಓದಲು ಇದರಿಂದ ತೊಂದರೆ ಆಗುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರ ಕೇಂದ್ರ ಗ್ರಂಥಾಲಯದ ಮೊದಲ ಮಹಡಿಯಲ್ಲಿ ಈ ಡಿಜಿಟಲ್‌ ಗ್ರಂಥಾಲಯ ರೂಪಿಸಲಾಗಿದೆ. ಇಲ್ಲಿ ಏಕಕಾಲಕ್ಕೆ 20 ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್‌ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ.ಇದನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಜೂನ್ 7 ರಂದು ಉದ್ಘಾಟಿಸಿದ್ದರು.

ಡಿಜಿಟಲ್‌ ಗ್ರಂಥಾಲಯದ ಬಾಗಿಲು ತೆರೆದು ಎರಡು ವಾರಗಳು ಸಮೀಪಿಸುತ್ತಿದ್ದರೂ, ಅದರಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವತ್ತ ಈ ಯೋಜನೆಯ ಗುತ್ತಿಗೆ ಪಡೆದಿರುವ ಕಂಪನಿ ಆಸಕ್ತಿ ತೋರಿಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಿಲ್ಲದ ಕಾರಣ ‘ಇ–ಗ್ರಂಥಾಲಯ’ ಬಳಕೆಯಲ್ಲಿ ಎದುರಾಗುವ ಸಣ್ಣ–ಪುಟ್ಟ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ಹೆಣಗಾಡುತ್ತಿದ್ದಾರೆ.

ADVERTISEMENT

ಪತ್ರಿಕೆ ಮತ್ತು ನಿಯತಕಾಲಿಕೆಗಳ ವಿಭಾಗದ ಮೇಲೆ ಕ್ಲಿಕ್‌ ಮಾಡಿದಾಗ, ಅವುಗಳು ಲೋಡ್‌ ಆಗಿ, ಡಿಸ್‌ಪ್ಲೆ ಆಗಲು ಸಮಯ ಹಿಡಿಯುತ್ತದೆ. ಅಲ್ಲದೆ, ಕನ್ನಡದ ಮುಖ್ಯವಾಹಿನಿಯ ಪತ್ರಿಕೆಗಳೇ ಇ–ಪೇಪರ್‌ ವಿಭಾಗದಲ್ಲಿ ಇಲ್ಲ. ಬಹುತೇಕ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳನ್ನೇ ವಿಭಾಗದಲ್ಲಿ ಜೋಡಿಸಿದ್ದಾರೆ ಎಂದು ಗ್ರಂಥಾಲಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

ಜೂನ್ ಬಂದರೂ ಡಿಜಿಟಲ್‌ ಗ್ರಂಥಾಲಯದ ನಿಯತಕಾಲಿಕೆಯ ಇಂಗ್ಲಿಷ್‌ ವಿಭಾಗದಲ್ಲಿ ಏಪ್ರಿಲ್ ಸಂಚಿಕೆಗಳೇ ಪ್ರದರ್ಶನಗೊಳ್ಳುತ್ತಿವೆ.

85ಕ್ಕೂ ಹೆಚ್ಚು ಪತ್ರಿಕೆಗಳು, 400ಕ್ಕೂ ಹೆಚ್ಚು ನಿಯತಕಾಲಿಕೆಗಳು, 200ಕ್ಕೂ ಹೆಚ್ಚು ಜರ್ನಲ್‌ಗಳು ಹಾಗೂ 100ಕ್ಕೂ ಹೆಚ್ಚು ಮಾದರಿ ಪ್ರಶ್ನೆಪತ್ರಿಕೆಗಳು (ಸ್ಪರ್ಧಾತ್ಮಕ ಪರೀಕ್ಷೆಗಾಗಿ) ಡಿಜಿಟಲ್‌ ಗ್ರಂಥಾಲಯದಲ್ಲಿ ಇವೆ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಆದರೆ, ಅಷ್ಟು ಪ್ರಮಾಣದ ಅಧ್ಯಯನ ಸಾಮಾಗ್ರಿ ಇಲ್ಲಿ ಲಭ್ಯವಿಲ್ಲ. ಕೇಳಿದರೆ, ‘ಸರ್ವರ್‌ಗೆ ಇನ್ನೂ ಅಪ್‌ಲೋಡ್‌ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಎಲ್ಲ ಸಾಮಗ್ರಿಗಳು ಲಭ್ಯ ಆಗಲಿವೆ’ ಎಂದು ಸಿಬ್ಬಂದಿ ಉತ್ತರಿಸುವರು ಎಂದು ಗ್ರಂಥಾಲಯಕ್ಕೆ ಬಂದಿದ್ದ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿ ಪ್ರವೀಣ್‌ ತಿಳಿಸಿದರು.

ಈ ಗ್ರಂಥಾಲಯದಲ್ಲಿ ಕಂಪ್ಯೂಟರ್‌ ಬಳಕೆ ಅವಕಾಶವಿದೆ. ಆದರೆ, ಬ್ರೌಸಿಂಗ್‌ ಮಾಡುವ ಆಯ್ಕೆಯೇ ಇಲ್ಲ. ಇದರಿಂದ ಅಧ್ಯಯನಕ್ಕೆ ಹೆಚ್ಚುವರಿ ಮಾಹಿತಿಯನ್ನು ಸರ್ಚ್‌ ಎಂಜಿನ್‌ಗಳಲ್ಲಿ ಹುಡುಕಲು ಆಗುತ್ತಿಲ್ಲ ಎಂದು ಕಲಾ ಕಾಲೇಜಿನ ಪದವಿ ವಿದ್ಯಾರ್ಥಿ ಸೋಮಶೇಖರ್‌ ಬೇಸರಿಸಿದರು.

ಸಿಬ್ಬಂದಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಂಥಾಲಯಕ್ಕೆ ಬರುವವರಿಗೆ ಅವುಗಳ ಸೌಲಭ್ಯವಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.