ತುಮಕೂರು: ಗಣೇಶ ಹಬ್ಬ ಆಚರಣೆಗೆ ಜಿಲ್ಲೆ ಸಜ್ಜಾಗಿದ್ದು, ಕಡಿಮೆ ತೂಕದ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಪಿಒಪಿ ವಿಗ್ರಹ ಬಳಸದಂತೆ ಸರ್ಕಾರ ಸೂಚಿಸಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಆ. 27ರಂದು ವಿನಾಯಕನ ಪ್ರತಿಷ್ಠಾಪನೆ ನೆರವೇರಲಿದೆ. ಕಳೆದ ಮೂರು–ನಾಲ್ಕು ದಿನಗಳ ಹಿಂದೆಯೇ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಜಿಲ್ಲೆ ಒಳಗೊಂಡಂತೆ ಹೊರ ಜಿಲ್ಲೆಗಳಲ್ಲಿ ತಯಾರಿಸಿದ ಮೂರ್ತಿಗಳನ್ನು ನಗರಕ್ಕೆ ತರಲಾಗಿದೆ. ಬಿ.ಎಚ್.ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಜೆ.ಸಿ.ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ವಿಗ್ರಹ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
1 ಅಡಿಯಿಂದ ಹಿಡಿದು 10 ಅಡಿ ವರೆಗೆ ವಿವಿಧ ಬಗೆಯ ಗಣಪನ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ₹300 ರಿಂದ ₹50 ಸಾವಿರ ಮೌಲ್ಯದ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಿಒಪಿ ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳ ಮಾರಾಟ, ವಿಸರ್ಜನೆ ನಿಷೇಧವಿದ್ದರೂ, ಸಂಪೂರ್ಣವಾಗಿ ಕಡಿವಾಣ ಬೀಳುತ್ತಿಲ್ಲ. ಪರಿಸರ ಸ್ನೇಹಿ, ಮಣ್ಣಿನ ಗಣಪನ ವಿಗ್ರಹಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ.
‘ಕಡಿಮೆ ತೂಕ ಇರುವ, ದೊಡ್ಡ ಗಾತ್ರದ ಮೂರ್ತಿಗಳನ್ನು ಕೇಳಿಕೊಂಡು ಹೆಚ್ಚಿನ ಜನರು ಬರುತ್ತಾರೆ. ಪೇಪರ್, ಬಣ್ಣ ಲೇಪಿತ ವಿಗ್ರಹ ಪ್ರತಿಷ್ಠಾಪನೆಗೆ ಆಸಕ್ತಿ ತೋರುತ್ತಿದ್ದಾರೆ. ನಾವು ನಿರ್ದಿಷ್ಟ, ಕಾಯಂ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಮೂರ್ತಿ ತಯಾರಿಸುತ್ತೇವೆ. ಹೀಗಾಗಿ ಮಾರಾಟಕ್ಕೆ ತೊಂದರೆಯಾಗುವುದಿಲ್ಲ’ ಎಂದು ನಗರದ ಚಿಕ್ಕಪೇಟೆಯ ಗಣಪತಿ ಮೂರ್ತಿ ತಯಾರಕ ಭಾನುಪ್ರಕಾಶ್ ಪ್ರತಿಕ್ರಿಯಿಸಿದರು.
ಬೆಲೆ ಹೆಚ್ಚಳ: ಬಣ್ಣ ಸೇರಿದಂತೆ ವಿನಾಯಕ ಮೂರ್ತಿ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಗಣೇಶ ವಿಗ್ರಹದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ವರ್ಷ ₹100 ಇದ್ದ ಮೂರ್ತಿ ದರ ಈ ಬಾರಿ ₹400ಕ್ಕೆ ಏರಿಕೆ ಕಂಡಿದೆ. ₹6 ಸಾವಿರ ಇದ್ದ ವಿಗ್ರಹದ ಬೆಲೆ ₹7 ಸಾವಿರಕ್ಕೆ ಜಿಗಿದಿದೆ.
‘ಮೂರ್ತಿ ತಯಾರಿಯ ವೆಚ್ಚ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಮಾರಾಟ ಬೆಲೆಯೂ ಹೆಚ್ಚಾಗಿದೆ. ಪ್ರತಿ ವರ್ಷ ಶೇ 10ರಿಂದ 20 ರಷ್ಟು ಹೆಚ್ಚಳವಾಗುವುದು ಸಾಮಾನ್ಯ. ಇದರಲ್ಲಿ ಬಹಳ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದು ತಿಪಟೂರಿನ ಹೊನ್ನವಳ್ಳಿಯ ರಾಮಮೂರ್ತಿ ಹೇಳಿದರು.
ನಗರದ ವಿವಿಧೆಡೆ ಮಾರಾಟ ಗಣೇಶ ಮೂರ್ತಿ ಬೆಲೆ ಹೆಚ್ಚಳ ದೊಡ್ಡ ಗಾತ್ರದ ಮೂರ್ತಿ ಪ್ರತಿಷ್ಠಾಪನೆಗೆ ಆಸಕ್ತಿ
ಗಣೇಶ ವಿಸರ್ಜನೆ ಟ್ಯಾಂಕರ್ ಮಹಾನಗರ ಪಾಲಿಕೆ ವ್ಯಾಪ್ತಿಯ ಗಾರೆನರಸಯ್ಯನ ಕಟ್ಟೆ ವಿದ್ಯಾನಗರದ ಪಂಪ್‌ಹೌಸ್ ಶಿರಾಗೇಟ್ ಬಳಿಯಿರುವ ಹೌಸಿಂಗ್ ಪಾರ್ಕ್ ಒಳಭಾಗದಲ್ಲಿ ಗೌರಿ-ಗಣೇಶ ಮೂರ್ತಿ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ. ಆ.27ರಂದು ಸಂಜೆ 4 ರಿಂದ 8 ಗಂಟೆಯ ವರೆಗೆ ಚಿಕ್ಕ ಗಣೇಶ ಮೂರ್ತಿ ವಿಸರ್ಜನೆಗೆ ವಿವಿಧೆಡೆ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಬಟವಾಡಿ ಆಂಜನೇಯ ದೇವಸ್ಥಾನ ಶೆಟ್ಟಿಹಳ್ಳಿ ರಸ್ತೆ ರಾಘವೇಂದ್ರ ಸ್ವಾಮಿ ಮಠ ಪಾಲಿಕೆ ಕಚೇರಿ ಆವರಣ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಅಗ್ರಹಾರದ ಶಿಶು ವಿಹಾರ ಕ್ಯಾತ್ಸಂದ್ರ ಬಸ್ ನಿಲ್ದಾಣ ಶಿರಾಗೇಟ್ ಕನಕ ವೃತ್ತ ಕೆಂಪಣ್ಣ ಅಂಗಡಿ ವೃತ್ತ ಎಸ್‌ಎಸ್‌ಐಟಿ ಕಾಲೇಜು ಹನುಮಂತಪುರ ದಿಬ್ಬೂರು ವೃತ್ತ ಮೆಳೇಕೋಟೆ ಬಳಿ ಟ್ಯಾಂಕರ್ ವಾಹನ ನಿಲ್ಲಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.