ADVERTISEMENT

ತುಮಕೂರು: 734 ಲೈನ್‌ಮ್ಯಾನ್‌ ಹುದ್ದೆ ಖಾಲಿ

ಜಿಲ್ಲೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಲೈನ್‌ಮೆನ್‌ ಸಂಖ್ಯೆ 1,017

​ಪ್ರಜಾವಾಣಿ ವಾರ್ತೆ
Published 27 ಮೇ 2022, 7:04 IST
Last Updated 27 ಮೇ 2022, 7:04 IST
ಕೆಲಸ ನಿರತ ಸಿಬ್ಬಂದಿ (ಸಾಂದರ್ಭಿಕ ಚಿತ್ರ)
ಕೆಲಸ ನಿರತ ಸಿಬ್ಬಂದಿ (ಸಾಂದರ್ಭಿಕ ಚಿತ್ರ)   

ತುಮಕೂರು: ಬೆಸ್ಕಾಂನಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವ ಲೈನ್‌ಮ್ಯಾನ್‌ಗಳ ಕೊರತೆ ಎದುರಾಗಿದೆ. ತಕ್ಷಣಕ್ಕೆ ಮಳೆಗಾಲ ಆರಂಭವಾಗಲಿದ್ದು, ಸಂಭವಿಸಬಹುದಾದ ಅನಾಹುತ, ಸಮಸ್ಯೆಗಳನ್ನು ಎದುರಿಸಲು ಅಗತ್ಯ ಸಿಬ್ಬಂದಿ ಇಲ್ಲವಾಗಿದೆ.

ಜಿಲ್ಲೆಯಲ್ಲಿ 1,017 ಮಂದಿ ಲೈನ್‌ಮ್ಯಾನ್‌ಗಳು ಕಾರ್ಯನಿರ್ವಹಿಸುತ್ತಿದ್ದು, 734 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ಭರ್ತಿ ಮಾಡಲು ಈವರೆಗೂ ಸರ್ಕಾರದಿಂದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ರೈತರು, ಸಾರ್ವಜನಿಕರು ಹೆಚ್ಚಿನತೊಂದರೆಗೆ ಸಿಲುಕುತ್ತಾರೆ. ಗಾಳಿ, ಮಳೆಯಿಂದ ಅನಾಹುತಗಳು ಸಂಭವಿಸಿದ ಸಮಯದಲ್ಲಿ ಇಡೀ ರಾತ್ರಿ ಕತ್ತಲೆಯಲ್ಲಿ ಕಳೆಯುವ ಪರಿಸ್ಥಿತಿ ಇಂದಿಗೂ ಇದೆ.

ತುಮಕೂರು ವಿಭಾಗೀಯ ಕೇಂದ್ರದಲ್ಲಿ 136, ಕುಣಿಗಲ್‌ನಲ್ಲಿ 113, ತಿಪಟೂರಿನಲ್ಲಿ 156, ಮಧುಗಿರಿಯಲ್ಲಿ 329 ಸೇರಿದಂತೆ ಒಟ್ಟು 734 ಲೈನ್‌ಮ್ಯಾನ್‌ ಹುದ್ದೆಗಳು ಖಾಲಿಯಿವೆ.

ADVERTISEMENT

ತುರ್ತು ಸಮಯದಲ್ಲಿ ನಗರದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೇ ಗ್ರಾಮೀಣ ಭಾಗಕ್ಕೂ ನಿಯೋಜಿಸಲಾಗುತ್ತದೆ. ಅಂತಹ ಸಮಯದಲ್ಲಿ ನಗರ ಪ್ರದೇಶದಲ್ಲೂ ಸಮಸ್ಯೆ ಎದುರಾಗುತ್ತದೆ. ಗ್ರಾಮಾಂತರ ಪ್ರದೇಶದ ಹಲವು ಕಡೆ ರೈತರೇ ಲೈನ್‌ಮ್ಯಾನ್‌ಗಳಾಗುತ್ತಾರೆ. ವಿದ್ಯುತ್‌ ಕಂಬ ಹತ್ತಿ ಲೈನ್‌ ಸರಿಪಡಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಜನರೇ ಮಾಡಿಕೊಳ್ಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಸುಮಾರು ವರ್ಷಗಳ ಹಳೆಯ ಕಂಬಗಳು ಹಾಗೆ ಉಳಿದಿವೆ. ಇವು ನೆಲಕ್ಕುರುಳಿ ಅನಾಹುತ ಸಂಭವಿಸುವ ಮುನ್ನ ತೆರವುಗೊಳಿಸಿ ಹೊಸ ಕಂಬ ಅಳವಡಿಸುವಂತೆ ರೈತ ಮುಖಂಡರು ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈಗಲೂ ಸಣ್ಣದಾಗಿ ಮಳೆ, ಗಾಳಿ ಬಂದರೂ ಹತ್ತಾರು ಕಂಬಗಳು ನೆಲಕ್ಕುರುಳುತ್ತಿವೆ. ಅಂತಹ ಸಮಯದಲ್ಲಿ ವಿದ್ಯುತ್ ಕಡಿತ ಸಾಮಾನ್ಯ ಎನ್ನುವಂತಾಗಿದೆ.

ಜಿಲ್ಲೆಯಲ್ಲಿ 280 ಮಂದಿ ಲೈನ್‌ಮ್ಯಾನ್‌ಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಹುದ್ದೆಗಳು ಖಾಲಿ ಇದ್ದರೂ ಭರ್ತಿಗೆ ಕ್ರಮಕೈಗೊಳ್ಳದೆ, ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ.

ಸಿಬ್ಬಂದಿ ಕೊರತೆಯಿಂದ ಈಗ ಕೆಲಸ ಮಾಡುತ್ತಿರುವ ಲೈನ್‌ಮ್ಯಾನ್‌ಗಳಿಗೆ ಕರ್ತವ್ಯದ ಒತ್ತಡ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಎಲ್ಲಾ ಕಡೆ ಸಮಸ್ಯೆಗಳು ಎದುರಾಗುವುದರಿಂದ ಕರ್ತವ್ಯ ನಿರ್ವಹಿಸಲು ತುಂಬಾ ಸಮಸ್ಯೆಯಾಗುತ್ತದೆ ಎಂದು ಹೆಸರೇಳಲು ಇಚ್ಛಿಸದ ಲೈನ್‌ಮ್ಯಾನ್‌ ಒಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.