ADVERTISEMENT

ಒಳಪಂಗಡದ ಭಿನ್ನಾಭಿಪ್ರಾಯದಿಂದ ಸಮಾಜ ಛಿದ್ರ: ಈಶ್ಚರ್ ಖಂಡ್ರೆ ವಿಷಾದ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 6:48 IST
Last Updated 1 ಸೆಪ್ಟೆಂಬರ್ 2025, 6:48 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. </p></div>

ತುಮಕೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

   

ತುಮಕೂರು: ವೀರಶೈವ ಲಿಂಗಾಯತ ಸಮುದಾಯ ಕವಲು ದಾರಿಯಲ್ಲಿದೆ. ಒಳಪಂಗಡಗಳ ಭಿನ್ನಾಭಿಪ್ರಾಯದಿಂದ ಸಮಾಜ ಛಿದ್ರವಾಗಿ ವಿಘಟನೆಯ ಕಡೆಗೆ ಸಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ಚರ್ ಖಂಡ್ರೆ ವಿಷಾದಿಸಿದರು.

ನಗರದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ನೌಕರರ ಸಮಾವೇಶ, ಅಭಿನಂದನಾ ಸಮಾರಂಭ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ವಿಘಟನೆ ಕೆಡಕು ತರುತ್ತದೆ, ನಾವೆಲ್ಲ ಒಗ್ಗೂಡಬೇಕು. ಎಲ್ಲರಿಗೂ ಒಳಿತು ಮಾಡಿ, ನಾವೇ ನಿರ್ಲಕ್ಷ್ಯಕ್ಕೆ ಒಳ ಪಟ್ಟರೆ ಮುಂದಿನ ಪೀಳಿಗೆಗೆ ಮೋಸ ಮಾಡಿದಂತೆ ಆಗುತ್ತದೆ. ಹೀಗಾಗಿ ಎಲ್ಲರ ಹಿತದೃಷ್ಟಿಯಿಂದ ಸಮಾಜ ಒಗ್ಗೂಡಿಸಬೇಕು. ಅಭಿಪ್ರಾಯ ಭೇದ ಬದಿಗೊತ್ತಿ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ಸರ್ವರಿಗೂ ಅನ್ನ, ಆಶ್ರಯ, ಸಂಸ್ಕಾರದ ಜತೆಗೆ ವಿದ್ಯೆ ಕೊಟ್ಟ ಕೀರ್ತಿ ವೀರಶೈವ ಸಮುದಾಯದ ಮಠ-ಮಾನ್ಯಗಳಿಗೆ ಸಲ್ಲುತ್ತದೆ. ನವ ಭಾರತ ನಿರ್ಮಾಣಕ್ಕೆ ಸಮುದಾಯ ಹೆಚ್ಚಿನ ಕೊಡುಗೆ ನೀಡಿದೆ. ತನ್ನದೇ ಆದ ಇತಿಹಾಸ, ಸಂಸ್ಕೃತಿ, ಪರಂಪರೆ ಹೊಂದಿದೆ. ಬಸವಾದಿ ಶರಣರು ಸಕಲ‌ಜೀವಗಳಿಗೆ ಲೇಸು ಬಯಸಿದ್ದರು. ವೀರಶೈವ ಮಹಾಸಭಾ ಶತಮಾನಕ್ಕಿಂತ ಹೆಚ್ಚು ಇತಿಹಾಸ ಹೊಂದಿದೆ ಎಂದರು.

ಶಾಸಕ ಕೆ.ಷಡಕ್ಷರಿ, ‘ವಿಶ್ವ ಮಾನವರ ಏಳಿಗೆಗಾಗಿ ಇರುವ ಧರ್ಮ ವೀರಶೈವ ಧರ್ಮ. ಈ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂದು ನಾವೆಲ್ಲ ಚಿಂತನೆ ಮಾಡಬೇಕು. ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸಮಾಜ ಒಡೆಯುತ್ತಿದ್ದೇವೆ. ಹೀಗೆ ಮಾಡುವುದು ಮುಂದಿನ ಪೀಳಿಗೆಗೆ ಶಾಪ ಆಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಕಳಕಳಿ ಇಟ್ಟುಕೊಂಡು ಸಮಾಜದಲ್ಲಿ ಒಗ್ಗಟ್ಟು ಸ್ಥಾಪನೆಗೆ ಶ್ರಮಿಸಬೇಕು’ ಎಂದು ಹೇಳಿದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್‌.ಪರಮೇಶ್‌, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್.ಜಯಶಂಕರ್, ಅಧ್ಯಕ್ಷ ಉಮೇಶ್, ಪದಾಧಿಕಾರಿಗಳಾದ ನಿಜಲಿಂಗಪ್ಪ, ಎಂ.ಬಿ.ಷಡಕ್ಷರಿ, ಟಿ.ಜೆ.ಜ್ಯೋತಿಪ್ರಕಾಶ್, ಮುಖಂಡರಾದ ಬಿ.ವಿ.ಪಾಲನೇತ್ರಯ್ಯ, ಸೋಮಶೇಖರ್‌, ಸೋಮಶೇಖರಯ್ಯ, ಬಿ.ನಟರಾಜು ಮೊದಲಾದವರು ಭಾಗವಹಿಸಿದ್ದರು.

ತುಮಕೂರಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿರುವ ಮನೆ ಮನೆ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಭಾನುವಾರ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಮುಖಂಡರಾದ ಗೀತಾ ರುದ್ರೇಶ್ ಕೆ.ಎಲ್.ದರ್ಶನ್ ಮಮತಾ ಉಮಾಮಹೇಶ್‌ ಇತರರು ಉಪಸ್ಥಿತರಿದ್ದರು

ಮನೆ ಮನೆ ಸದಸ್ಯತ್ವಕ್ಕೆ ಚಾಲನೆ

ತುಮಕೂರು: ವೀರಶೈವ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿರುವ ಮನೆ ಮನೆ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಚಾಲನೆ ನೀಡಿದರು. ‘ಸಂಘಟಿತರಾಗಿ ಸಮುದಾಯದ ಆಗು–ಹೋಗುಗಳ ಬಗ್ಗೆ ಚರ್ಚಿಸಿ ಎದುರಾಗುವ ಸವಾಲು ಸಮರ್ಥವಾಗಿ ನಿಭಾಯಿಸುವ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸಬೇಕು’ ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಮುಖಂಡರಾದ ಶಶಿ ಹುಲಿಕುಂಟೇಮಠ್ ಗೀತಾ ರುದ್ರೇಶ್ ಕೆ.ಎಸ್.ಸಿದ್ಧಲಿಂಗಪ್ಪ ಕೆ.ಎಲ್.ದರ್ಶನ್ ಮಮತಾ ಉಮಾಮಹೇಶ್ ತರಕಾರಿ ಮಹೇಶ್ ಜಯಪ್ರಕಾಶ್‌ ಇತರರು ಹಾಜರಿದ್ದರು.

20 ನವಿಲು ಸಾವು: ವರದಿ ಸಲ್ಲಿಕೆ

ತುಮಕೂರು: ಮಧುಗಿರಿ ತಾಲ್ಲೂಕಿನ ಹನುಮಂತಪುರದಲ್ಲಿ 20ಕ್ಕೂ ಹೆಚ್ಚು ನವಿಲುಗಳು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿ ಸಲ್ಲಿಕೆಯಾಗಿದೆ. ವರದಿ ಅಧ್ಯಯನ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಸುಳ್ಳು ಹೇಳುವುದೇ ಕೆಲಸ

ವಿರೋಧ ಪಕ್ಷದವರಿಗೆ ಬರೀ ನಾಟಕ ಮಾಡುವುದು ಸುಳ್ಳು ಹೇಳುವುದೇ ಕೆಲಸವಾಗಿದೆ. ಯಾವುದೇ ವಿಚಾರ ಇಲ್ಲದೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು. ಧರ್ಮಸ್ಥಳದಲ್ಲಿ ಬಿಜೆಪಿ–ಜೆಡಿಎಸ್‌ ಹಮ್ಮಿಕೊಂಡಿರುವ ಸಮಾರಂಭದ ಕುರಿತು ಪ್ರತಿಕ್ರಿಯಿಸಿ ಜಾತಿ ಧರ್ಮಗಳ ಮಧ್ಯೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.