ADVERTISEMENT

‘ಲಿಂಕ್ ಕೆನಾಲ್: ಗೋಲಿಬಾರ್‌, ಲಾಠಿ ಚಾರ್ಜ್‌ಗೂ ಬಗ್ಗಲ್ಲ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 3:00 IST
Last Updated 11 ಜುಲೈ 2025, 3:00 IST
ಶಾಸಕ ಎಂ.ಟಿ.ಕೃಷ್ಣಪ್ಪ
ಶಾಸಕ ಎಂ.ಟಿ.ಕೃಷ್ಣಪ್ಪ   

ತುರುವೇಕೆರೆ: ‘ರೈತರಿಗೆ ಮರಣ ಶಾಸನವಾಗಿರುವ ಲಿಂಕ್‌ ಕೆನಾಲ್‌ ಕಾಮಗಾರಿ ಹೋರಾಟದಲ್ಲಿ ನಮ್ಮ ಮೇಲೆ ಗೋಲಿಬಾರ್‌, ಲಾಠಿ ಚಾರ್ಜ್‌ ಮಾಡಿದರೂ ಅಂಜುವ ಜಾಯಮಾನ ನಮ್ಮದಲ್ಲ. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಗೆ 24 ಟಿಎಂಸಿ ಹೇಮಾವತಿ ನೀರು ನಿಗದಿಯಾಗಿದೆ. ಅದರಲ್ಲಿ ಕುಣಿಗಲ್‌ಗೆ 3.4 ಟಿಎಂಸಿಯಷ್ಟು ನೀರು ನೀಡಲು ತೀರ್ಮಾನಿಸಲಾಗಿದೆ. ತುಮಕೂರು ನಾಲೆಯಿಂದ ಕುಣಿಗಲ್‌ಗೆ 3.4 ಟಿಎಂಸಿ ನೀರು ಹರಿದರೆ, ನಾಗಮಂಗಲ ನಾಲೆಯಿಂದ ಸುಮಾರು ಮೂರು ಟಿಎಂಸಿ ನೀರು ಕುಣಿಗಲ್‌ಗೆ ಹರಿದು ಹೋಗುತ್ತಿದೆ. ಇಷ್ಟಾದರೂ ನೀರು ಬೇಕು’ ಎಂದು ಶಾಸಕ ರಂಗನಾಥ್‌ ಆಗ್ರಹಿಸುತ್ತಿರುವುದು ಆಶ್ಚರ್ಯ ತರಿಸಿದೆ ಎಂದರು.

ಈಗಾಗಲೇ ಜಿಲ್ಲೆಯ ರೈತರು ಕಾಂಗ್ರೆಸ್‌ ಸರ್ಕಾರದ ಈ ಕೆಟ್ಟ ತೀರ್ಮಾನದ ವಿರುದ್ಧ ಸಿಡಿದೆದ್ದಿದ್ದಾರೆ. ಆಗಲೇ 25 ಸಾವಿರ ರೈತರು ಪ್ರತಿಭಟನೆಗೆ ಸಾಕ್ಷಿಯಾಗಿದ್ದರು. ಈಗ ಮತ್ತೆ ಕೆನಾಲ್‌ ಕಾಮಗಾರಿ ಮುಂದುರೆಸಲು ಯತ್ನಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ರೈತರು ಹೋರಾಟಕ್ಕೆ ಇಳಿಯುವರು ಎಂದು ಎಚ್ಚರಿಸಿದರು.

ADVERTISEMENT

ಕೆನಾಲ್‌ನ ಮುಖ್ಯ ತಾಂತ್ರಿಕ ಸಲಹೆಗಾರರಾಗಿರುವ ನಿವೃತ್ತ ಎಂಜಿನಿಯರ್‌ ಜಯಪ್ರಕಾಶ್‌ ಅವರಿಗೆ ವಾಸ್ತವ ಗೊತ್ತಿಲ್ಲ. ತುಮಕೂರು ನಾಲೆಯಿಂದ ಹರಿಯುತ್ತಿರುವ ನೀರನ್ನು ತಪ್ಪಾಗಿ ಪರಿಗಣಿಸಿದ್ದಾರೆ. ಡಿಸಿಎಂ ಅವರಿಂದ ಶಹಬ್ಬಾಶ್‌ಗಿರಿ ತೆಗೆದುಕೊಳ್ಳಲು ಜಿಲ್ಲೆಯ ರೈತರ ಪಾಲಿಗೆ ವಿಲನ್‌ ಆಗಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

‘ಲಿಂಕ್‌ ಕೆನಾಲ್ ಅವಶ್ಯಕವಿಲ್ಲ. ಹೆಚ್ಚು ನೀರು ಬೇಕಾದಲ್ಲಿ ಕಾವೇರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಿ. ಅದರ ಆದೇಶದ ಮೇರೆಗೆ ಹೆಚ್ಚು ನೀರು ಪಡೆದುಕೊಳ್ಳಲಿ. ಅಧಿಕಾರಿಗಳು ನೀಡಿರುವ ತಪ್ಪು ಮಾಹಿತಿಯಿಂದಾಗಿ ಜಿಲ್ಲೆ ಅನಾಥವಾಗುತ್ತಿದೆ. ತಾವೇ ಸ್ವತಃ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತಿದ್ದೇನೆ. ಕೂಡಲೇ ಲಿಂಕ್‌ ಕೆನಾಲ್‌ ಬಂದ್‌ ಮಾಡಬೇಕು. ದುಂಡಾವರ್ತನೆಗೆ ಹೆದರೋರು ನಾವಲ್ಲ’ ಎಂದು ಗುಡುಗಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹಿಂಡುಮಾರನಹಳ್ಳಿ ನಾಗರಾಜ್‌, ಮಂಗೀಕುಪ್ಪೆ ಬಸವರಾಜು, ಕುಶಾಲ್‌ ಕುಮಾರ್‌, ಮಾಜಿ ನಿರ್ದೇಶಕ ವಿಜಯೇಂದ್ರ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್‌, ಬಡಗರಹಳ್ಳಿ ತ್ಯಾಗರಾಜ್‌, ಆನೇಕೆರೆ ಗ್ರಾಮ ಪಂಚಾಯಿತಿ ಸದಸ್ಯ ಪುನಿತ್‌, ಮುನಿಯೂರು ರಂಗಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.