ADVERTISEMENT

ತುಮಕೂರು | ಕಾರ್ಖಾನೆ ತೆರೆದರೂ ಉತ್ಪಾದನೆ ಇಲ್ಲ

ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ಸಿಕ್ಕರೂ ಆರಂಭವಾಗದ ಚಟುವಟಿಕೆ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಮೇ 2020, 20:15 IST
Last Updated 20 ಮೇ 2020, 20:15 IST
ಹಿರೇಹಳ್ಳಿಯ ಕೈಗಾರಿಕಾ ಪ್ರದೇಶದ ಗ್ರಾನೈಟ್ ಕೈಗಾರಿಕೆಯೊಂದರಲ್ಲಿ ಕಾರ್ಮಿಕರಿಲ್ಲದೆ ಕೆಲಸ ಸ್ಥಗಿತವಾಗಿದೆ
ಹಿರೇಹಳ್ಳಿಯ ಕೈಗಾರಿಕಾ ಪ್ರದೇಶದ ಗ್ರಾನೈಟ್ ಕೈಗಾರಿಕೆಯೊಂದರಲ್ಲಿ ಕಾರ್ಮಿಕರಿಲ್ಲದೆ ಕೆಲಸ ಸ್ಥಗಿತವಾಗಿದೆ   

ತುಮಕೂರು: ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಜಿಲ್ಲೆಯಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ಹೀಗೆ ಕೈಗಾರಿಕೆಗಳು ಬಾಗಿಲು ತೆರೆದು ಒಂದು ವಾರ ಕಳೆದರೂ ಉತ್ಪಾದನೆ ಮಾತ್ರ ಇಲ್ಲ!

ಕೊರೊನಾಕ್ಕೂ ಮುನ್ನ ಇದ್ದ ಕೈಗಾರಿಕಾ ಚಟುವಟಿಕೆಗಳು ಅದೇ ಹಾದಿಯಲ್ಲಿ ಸಾಗಲು ಕನಿಷ್ಠ ಆರರಿಂದ ಒಂದು ವರ್ಷವಾದರೂ ಬೇಕು ಎನ್ನುತ್ತಿದ್ದಾರೆ ಜಿಲ್ಲೆಯ ಕೈಗಾರಿಕೋದ್ಯಮಿಗಳು.

ವಸಂತನರಸಾಪುರ, ಅಂತರಸನ ಹಳ್ಳಿ, ಹಿರೇಹಳ್ಳಿ, ಸತ್ಯಮಂಗಲ ಪ್ರದೇಶಗಳು ಜಿಲ್ಲೆಯಲ್ಲಿ ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿವೆ. ‌ತಾಲ್ಲೂಕು ಮಟ್ಟದಲ್ಲಿಯೂ ಕಾರ್ಖಾನೆ ಗಳು ಇವೆ. ಚೆನ್ನೈ– ಮುಂಬೈ ಕೈಗಾರಿಕಾ ಕಾರಿಡಾರ್‌ನಲ್ಲಿರುವ ವಸಂತನರಸಾ ಪುರ ‘ಬೃಹತ್ ಕೈಗಾರಿಕಾ’ ಪ್ರದೇಶ ವಾಗುವತ್ತ ಹೆಜ್ಜೆ ಇಡುತ್ತಿದೆ. ಆದರೆ ಕೊರೊನಾ ಸಹಜವಾಗಿ ಜಿಲ್ಲೆಯ ಕೈಗಾರಿಕೀಕರಣದ ಮೇಲೆ ದುಷ್ಪರಿಣಾಮ ಬೀರಿದೆ.

ADVERTISEMENT

ಜಿಲ್ಲೆಯಲ್ಲಿ ಸಣ್ಣ, ಅತಿಸಣ್ಣ ಹಾಗೂ ಬೃಹತ್ ಸೇರಿದಂತೆ 9 ಸಾವಿರ ಕೈಗಾರಿಕೆಗಳಿವೆ. ಇವುಗಳಲ್ಲಿ 7,860 ಕೈಗಾರಿಕೆಗಳು ಬಾಗಿಲು ತೆರೆದಿವೆ. ಆದರೆ ಬಹುತೇಕ ಕೈಗಾರಿಕೆಗಳು ಉತ್ಪಾದನೆ ಆರಂಭಿಸಿಲ್ಲ.

ಸರಕುಗಳನ್ನು ಪೂರೈಸಿ ಎಂದು ಕೈಗಾರಿಕೆಗಳಿಗೆ ಅವುಗಳ ಗ್ರಾಹಕರು ಮತ್ತು ಖರೀದಿದಾರರಿಂದ ಬೇಡಿಕೆ ಗಳು ಬರುತ್ತಿಲ್ಲ. ಹೆಸರಿಗೆ ಮಾತ್ರ ಕೈಗಾರಿಕೆಗಳು ತೆರೆದಿವೆ ಎನ್ನುವ ಸ್ಥಿತಿ ಇದೆ. ಈ ಪ್ರದೇಶಗಳನ್ನು ಒಮ್ಮೆ ಸುತ್ತಿ ಬಂದರೆ ನೈಜ ದರ್ಶನವಾಗುತ್ತದೆ.

ಸಂಗ್ರಹಿಸಿರುವ ಸಂಪನ್ಮೂಲದಿಂದ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಬೇಕು ಎನ್ನುವ ಆಸೆ ಮಾಲೀಕರಿಗೂ ಇದೆ. ಆದರೆ ಉತ್ಪಾದಿತ ಸರಕುಗಳನ್ನು ಯಾರಿಗೆ ಪೂರೈಸಬೇಕು ಎನ್ನುವ ಚಿಂತೆ ಕಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಉತ್ತರ ಭಾರತಕ್ಕೆ ತೆಂಗು, ತೆಂಗು ಸಂಬಂಧಿ ಉತ್ಪನ್ನಗಳು ಮತ್ತಿತರ ಸರಕುಗಳು ಸಾಗಾಣೆ ಆಗುತ್ತಿದ್ದವು. ಆದರೆ ಈಗ ಎಲ್ಲವೂ ಬಂದ್. ಆ ಕಡೆಯಿಂದಲೂ ಸರಕುಗಳನ್ನು ಕಳುಹಿಸಿ ಎನ್ನುವ ಸೊಲ್ಲು ಇಲ್ಲವಾಗಿದೆ.

ಗ್ರಾನೈಟ್, ಅಕ್ಕಿ ಗಿರಣಿ ಸೇರಿದಂತೆ ಶ್ರಮಾಧಾರಿತ ಕೈಗಾರಿಕೆಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ. ಇವುಗಳಲ್ಲಿ ಉತ್ತರ ಭಾರತದ ಕಾರ್ಮಿಕರು ದುಡಿಯುತ್ತಿದ್ದರು. ಶೇ 90ಕ್ಕೂ ಹೆಚ್ಚು ಮಂದಿ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಈ ಕಾರಣದಿಂದ ಅಲ್ಲಿಯೂ ಚಟುವಟಿಕೆಗಳು ನಡೆಯುತ್ತಿಲ್ಲ.

ಕಚ್ಚಾವಸ್ತುಗಳ ಪೂರೈಕೆ ಇಲ್ಲ: ಮುಂಬೈ, ಆಂಧ್ರಪ್ರದೇಶ, ಬೆಂಗಳೂರು ಮತ್ತಿತರ ನಗರಗಳಿಂದ ಕಚ್ಚಾವಸ್ತುಗಳನ್ನು ತರಿಸಿ ಜಿಲ್ಲೆಯಲ್ಲಿ ಕೆಲವು ಕೈಗಾರಿಕೆಗಳು ಚಟುವಟಿಕೆ ನಡೆಸುತ್ತಿದ್ದವು. ಹೀಗೆ ಕಚ್ಚಾವಸ್ತುಗಳಿಗಾಗಿ ಹೊರ ರಾಜ್ಯಗಳನ್ನು ಅವಲಂಬಿಸಿರುವ ಕೈಗಾರಿಕೆಗಳು ಸಹ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ.

ಸುಧಾರಿಸಲು ಆರು ತಿಂಗಳು ಬೇಕು
ಕೈಗಾರಿಕೆಗಳಿಗೆ ಆರ್ಡರ್ ಬರುತ್ತಿಲ್ಲ. ಕಾರ್ಮಿಕರ ಕೊರತೆ ಇದೆ. ಲಾಕ್‌ಡೌನ್ ಪರಿಣಾಮ ಬ್ಯಾಂಕಿಂಗ್ ಸಮಸ್ಯೆ ಆಗಿದೆ. ಈ ಎಲ್ಲ ಕಾರಣಗಳು ಜಿಲ್ಲೆ ಸೇರಿದಂತೆ ಇಡೀ ಕೈಗಾರಿಕಾ ವಲಯದ ಮೇಲೆ ಪರಿಣಾಮ ಬೀರಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎಚ್‌.ಜಿ.ಚಂದ್ರಶೇಖರ್ ಪ್ರತಿಪಾದಿಸಿದರು.

ಕೆಲವರಿಗೆ ಆರ್ಡರ್‌ಗಳು ಇವೆ. ಆದರೆ ಅದು ಖಚಿತವಾಗದ ಹೊರತು ಕಳುಹಿಸುವಂತಿಲ್ಲ. ಉತ್ಪಾದನೆ ಆರಂಭಿಸಿದರೂ ಸರಕುಗಳನ್ನು ಪೂರೈಸಿ ಎಂದು ಯಾರೂ ಹೇಳುತ್ತಿಲ್ಲ. ಕೈಗಾರಿಕೆಗಳ ಬಳಿ ಸರಕು ಸಂಗ್ರಹ ಇದ್ದರೂ ಮಾರಾಟವಾಗುತ್ತಿಲ್ಲ ಎಂದು ತಿಳಿಸಿದರು.

ಚಟುವಟಿಕೆ ಆರಂಭಕ್ಕೆ ಹಣಕಾಸು ಸಹ ಬೇಕು. ಪ್ರಧಾನಿ ಘೋಷಿಸಿರುವ ₹ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ನಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡಲಾಗಿದೆ. ಆದರೆ ಅದು ಸ್ಥಳೀಯ ಬ್ಯಾಂಕ್‌ಗಳಿಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಗ್ರಾಹಕರು ಸಹ ಈ ಮುಂಚಿನಷ್ಟು ಖರೀದಿ ಮಾಡುತ್ತಿಲ್ಲ. ಹಿಂದಿನ ಸ್ಥಿತಿಗೆ ಬರಲು ಕನಿಷ್ಠ ಆರು ತಿಂಗಳಾದರೂ ಬೇಕು ಎನ್ನುತ್ತಾರೆ.

ಸ್ಥಳೀಯರಿಗೆ ಉದ್ಯೋಗ
ಹೊರರಾಜ್ಯಗಳ ಕಾರ್ಮಿಕರು ವಾಪಸ್ ಆಗಿರುವುದು ಸಹ ಕೈಗಾರಿಕಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಕೈಗಾರಿಕೆಗಳು ಮತ್ತು ನಾವು ಸೂಕ್ಷ್ಮವಾಗಿ ಆಲೋಚಿಸಿದರೆ ಇದು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಕಾಲ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್ ತಿಳಿಸಿದರು.

ಕೌಶಲಾಭಿವೃದ್ಧಿ ಬಗ್ಗೆ ಆಲೋಚಿಸಬೇಕಿದೆ. ಕೈಗಾರಿಕೆಗಳು ಮತ್ತು ನಾವು ಸ್ಥಳೀಯರಿಗೆ ತರಬೇತಿ ನೀಡಿ ಕೆಲಸದಲ್ಲಿ ತೊಡಗುವಂತೆ ಮಾಡಬೇಕಾಗಿದೆ. ಈ ಬಗ್ಗೆ ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆರಂಭವಾಗದ ಗ್ರಾನೈಟ್ ಉದ್ಯಮ
ಜಿಲ್ಲೆಯಲ್ಲಿ ಗ್ರಾನೈಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಮಾರು 100 ಕೈಗಾರಿಕೆಗಳಿವೆ. ಇವುಗಳಲ್ಲಿ ಶೇ 80ರಷ್ಟು ಚಟುವಟಿಕೆಗಳನ್ನು ಆರಂಭಿಸಿಲ್ಲ ಎನ್ನುತ್ತಾರೆ ತುಮಕೂರು ಚೇತನಾ ಗ್ರಾನೈಟ್ಸ್ ಮಾಲೀಕ ಎಚ್‌.ಬಿ.ರುದ್ರೇಶ್.

ಮಡಕಶಿರಾ ಸೇರಿದಂತೆ ಅಂತರರಾಜ್ಯಗಳಿಗೆ ತೆರಳಿ ಖುದ್ದಾಗಿ ಕಚ್ಚಾವಸ್ತುಗಳನ್ನು ತರುತ್ತೇವೆ. ಈಗ ಅಂತರರಾಜ್ಯ ನಿರ್ಬಂಧ ಇದೆ. ಅವರನ್ನೇ ಕಚ್ಚಾವಸ್ತುಗಳನ್ನು ಕಳುಹಿಸಿ ಅಂದರೆ ಗುಣಮಟ್ಟವಿಲ್ಲದ ಸರಕುಗಳನ್ನು ಕಳುಹಿಸುತ್ತಾರೆ ಎಂದರು.

ಗ್ರಾನೈಟ್‌ ಕೆಲಸದಲ್ಲಿ ತೊಡಗಿರುವವರಲ್ಲಿ ಉತ್ತರ ಭಾರತದ ಕಾರ್ಮಿಕರೇ ಹೆಚ್ಚು. ಕಟಿಂಗ್, ಪಾಲಿಷ್, ಲೋಡ್– ಹೀಗೆ ಒಬ್ಬರನ್ನೊಬ್ಬರು ಆಶ್ರಯಿಸಿರುವ ಕೆಲಸ. ಒಬ್ಬರು ಇಲ್ಲ ಅಂದರೂ ನಡೆಯುವುದಿಲ್ಲ. ಈಗ ಎಲ್ಲ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿರುವುದರಿಂದ ಉದ್ಯಮಗಳು ಬಂದ್ ಆಗಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.