ADVERTISEMENT

ಎರಡು ದಿನ ಮೊದಲೇ ಲಾಕ್‌ಡೌನ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:20 IST
Last Updated 23 ಏಪ್ರಿಲ್ 2021, 5:20 IST
ತುಮಕೂರು ಎಂ.ಜಿ.ರಸ್ತೆಯಲ್ಲಿ ಅಂಗಡಿ ಮುಚ್ಚಿರುವುದು
ತುಮಕೂರು ಎಂ.ಜಿ.ರಸ್ತೆಯಲ್ಲಿ ಅಂಗಡಿ ಮುಚ್ಚಿರುವುದು   

ತುಮಕೂರು: ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ವಾರಾಂತ್ಯದ ಲಾಕ್‌ಡೌನ್‍ಗೆ ಇನ್ನು ಎರಡು ದಿನ ಬಾಕಿ ಇರುವಾಗಲೇ ಗುರುವಾರದಿಂದಲೇ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಬಂದ್ ಮಾಡಿಸಲಾಯಿತು.

ಈಗ ಪ್ರತಿ ದಿನವೂ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಜನರಲ್ಲಿ ಆತಂಕ ತರಿಸಿದೆ. ಜಿಲ್ಲಾ ಆಡಳಿತ ಸಾಕಷ್ಟು ಮುಂಜಾಗ್ರತೆ ವಹಿಸಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ವಹಿವಾಟು ಸ್ಥಗಿತದಿಂದಾಗಿ ನಗರದಲ್ಲಿ ಬಹುತೇಕ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಜನರ ಓಡಾಟವೂ ವಿರಳವಾಗಿದ್ದು, ಕರ್ಫ್ಯೂ ವಿಧಿಸಿದಂತೆ ಕಂಡುಬಂತು.

ADVERTISEMENT

ಕಟ್ಟುನಿಟ್ಟಾಗಿ ಕೋವಿಡ್–19 ನಿಯಮಗಳನ್ನು ಜಾರಿಗೆ ತರಲಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ನೇತೃತ್ವದ ಅಧಿಕಾರಿಗಳ ತಂಡ ರಸ್ತೆಗಿಳಿದು ಅಂಗಡಿಗಳ ಬಾಗಿಲು ಮುಚ್ಚಿಸಿದರು.

ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎಂ.ಜಿ.ರಸ್ತೆಯಲ್ಲಿ ಮೊದಲಿಗೆ ಬಾಗಿಲು ಮುಚ್ಚಿಸಲಾಯಿತು. ನಂತರ ಬಿ.ಎಚ್.ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ಎಲ್ಲೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಗಡಿಗಳ ಬಾಗಿಲು ಹಾಕಿಸಿದರು.

ಪೊಲೀಸ್ ಅಧಿಕಾರಿಗಳು ಅಂಗಡಿಗಳ ಬಾಗಿಲು ಮುಚ್ಚುವಂತೆ ವರ್ತಕರಿಗೆ ಸೂಚಿಸಿದಾಗ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರು. ಕೋವಿಡ್ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿರೋಧಿಸಿದರೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿ
ದರು. ನಂತರ ಅಂಗಡಿ ಬಾಗಿಲು ಬಂದ್ ಮಾಡಿಕೊಂಡು ಮನೆಗಳತ್ತ ತೆರಳಿದರು.

ಕೋವಿಡ್–19 ಮಾರ್ಗಸೂಚಿ ಪಾಲಿಸಿಕೊಂಡು ವ್ಯಾಪಾರ ವಹಿವಾಟಿಗೆ ರಾಜ್ಯ ಸರ್ಕಾರವೇ ಅವಕಾಶ ನೀಡಿದೆ. ಆದರೆ ನಗರದಲ್ಲಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಂಗಡಿ ಮುಚ್ಚಿಸಿ, ವಹಿವಾಟು ಬಂದ್ ಮಾಡಿಸಿದ್ದಕ್ಕೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆ ವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಅದಕ್ಕೂ ಮುನ್ನ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲಿದ್ದರು.ವ್ಯಾಪಾರಸ್ಥರೂ ಅಲ್ಪಸ್ವಲ್ಪ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಂಗಡಿ ಮುಚ್ಚಿಸಿದರು. ಯಾವುದೇ ಮುನ್ಸೂಚನೆ ನೀಡದೆ ತೊಂದರೆ ಮಾಡಿದರು ಎಂದು ವರ್ತಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.