ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ | ಸೋಮಣ್ಣಗೆ ಟಿಕೆಟ್: ಬಸವರಾಜು ಮೇಲುಗೈ

ಮುದ್ದಹನುಮೇಗೌಡ– ಸೋಮಣ್ಣ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧ

ಕೆ.ಜೆ.ಮರಿಯಪ್ಪ
Published 14 ಮಾರ್ಚ್ 2024, 7:06 IST
Last Updated 14 ಮಾರ್ಚ್ 2024, 7:06 IST
ವಿ.ಸೋಮಣ್ಣ
ವಿ.ಸೋಮಣ್ಣ   

ತುಮಕೂರು: ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಮತ್ತೆ ಲಿಂಗಾಯತ ಸಮುದಾಯಕ್ಕೆ ಪಕ್ಷ ಮಣೆ ಹಾಕಿದೆ. ‘ಲಿಂಗಾಯತರಿಗೆ ಟಿಕೆಟ್ ನೀಡಬೇಕು’ ಎಂಬ ಬೇಡಿಕೆಗೆ ಕೊನೆಗೂ ಹೈಕಮಾಂಡ್ ಒಪ್ಪಿಗೆಯ ಮುದ್ರೆ ಒತ್ತಿದೆ.

ಕಾಂಗ್ರೆಸ್‌ನಿಂದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಖಾಡಕ್ಕೆ ಇಳಿದಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಸಹ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಮುದ್ದಹನುಮೇಗೌಡ ಹಾಗೂ ಎನ್‌ಡಿಎ ಅಭ್ಯರ್ಥಿ ಸೋಮಣ್ಣ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

ಕೊನೆ ಹಂತದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಸೋಮಣ್ಣ ಹಾಗೂ ಮತ್ತೊಬ್ಬ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಸಂಸದ ಜಿ.ಎಸ್.ಬಸವರಾಜು ಅವರು ಸೋಮಣ್ಣ ಪರವಾಗಿ ನಿಂತಿದ್ದರು. ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೂ ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಪಕ್ಷದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಿದ್ದಾರೆ ಎಂದು ಪಕ್ಷ ಹಾಗೂ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಮಾಧುಸ್ವಾಮಿ ನಂಬಿದ್ದರು. ಅವರ ಮೂಲಕ ವರಿಷ್ಠರ ಹಂತದಲ್ಲಿ ಲಾಬಿ ನಡೆಸಿದ್ದರು. ಬಸವರಾಜು ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಮಾಧುಸ್ವಾಮಿ ಅವರಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಅವರು ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ನಂತರ ಯಡಿಯೂರಪ್ಪ ಅವರನ್ನು ಟೀಕಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿದ ಸಮಯಲ್ಲೂ ನೇರವಾಗಿ ಟೀಕಿಸಿದ್ದರು. ಜತೆಗೆ ಈ ಇಬ್ಬರು ನಾಯಕರಿಂದ ಅಂತರ ಕಾಯ್ದುಕೊಂಡಿದ್ದರು. ಹಾಗಾಗಿ ಯಡಿಯೂರಪ್ಪ ಬೆಂಬಲಿಸಲಾರರು. ಮಧುಸ್ವಾಮಿ ಅವರಿಗೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು.

ರಾಜ್ಯಸಭೆಗೆ ಅವಕಾಶ ಬಯಸಿದ್ದರೂ ಸಾಧ್ಯವಾಗಲಿಲ್ಲ. ಕೊನೆಗೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಸೋಮಣ್ಣ ಪಟ್ಟು ಹಿಡಿದಿದ್ದರು. ದಳಪತಿಗಳಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮೂಲಕವೂ ಒತ್ತಡ ಹಾಕಿಸಿದ್ದರು. ಸೋಮಣ್ಣ ಪರ ಯಡಿಯೂರಪ್ಪ ನಿಲ್ಲದಿದ್ದರೂ ಟಿಕೆಟ್ ಪಡೆದುಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ.

ಮಾಧುಸ್ವಾಮಿ ಅವರಿಗೆ ಅವಕಾಶ ಸಿಗದಂತೆ ನೋಡಿಕೊಂಡಿರುವ ಜಿ.ಎಸ್.ಬಸವರಾಜು, ‘ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ ಪಕ್ಷದಲ್ಲಿ ತಮ್ಮ ಹಿಡಿತ ಕಡಿಮೆಯಾಗಿಲ್ಲ. ನಿವೃತ್ತಿ ಅಂಚಿನಲ್ಲೂ ಕಾರ್ಯ ಸಾಧನೆಯಾಗಿದೆ. ಪಕ್ಷದಲ್ಲಿ ತಮ್ಮದೇ ನಡೆಯುವುದು’ ಎಂಬ ಸಂದೇಶವನ್ನು ವಿರೋಧಿ ಪಾಳಯಕ್ಕೆ ರವಾನಿಸಿದ್ದಾರೆ.  ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಮಯದಿಂದಲೂ ಮಾಧುಸ್ವಾಮಿ– ಬಸವರಾಜು ನಡುವೆ ಹೊಂದಾಣಿಕೆ ಇರಲಿಲ್ಲ. ಈಗಲೂ ಅವಕಾಶ ಸಿಗದಂತೆ ನೋಡಿಕೊಂಡಿದ್ದಾರೆ ಎಂಬ ಚರ್ಚೆಗಳು ನಡೆದಿವೆ.

ಸಿದ್ಧಗಂಗಾ ಆಸ್ಪತ್ರೆಯ ಡಾ.ಎಸ್.ಪರಮೇಶ್, ಎಚ್.ಎನ್.ಚಂದ್ರಶೇಖರ್, ವಿನಯ್ ಬಿದರೆ, ಸ್ಪೂರ್ತಿ ಚಿದಾನಂದ್, ಅಂಬಿಕಾ ಹುಲಿನಾಯ್ಕರ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಕೇಂದ್ರ ಚುನಾವಣಾ ಸಮಿತಿಗೆ ಸೋಮಣ್ಣ, ಮಾಧುಸ್ವಾಮಿ, ಅಂಬಿಕಾ ಹೆಸರು ಶಿಫಾರಸು ಮಾಡಲಾಗಿತ್ತು. ಕೊನೆಗೆ ಸೋಮಣ್ಣ ಅವರಿಗೆ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ.

ಹಲವು ಸವಾಲು

ಸೋಮಣ್ಣ ಅವರಿಗೆ ಚುನಾವಣೆ ಸಮಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿದ್ದು ಮೊದಲಿಗೆ ‘ಹೊರಗಿನವರು’ ಎಂದು ತಮ್ಮದೇ ಪಕ್ಷದವರು ನಡೆಸುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕಿದೆ. ಪಕ್ಷದಲ್ಲೇ ಇರುವ ಭಿನ್ನಮತೀಯರ ಗುಂಪನ್ನು ತಮ್ಮತ್ತ ಒಲಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ. ‘ಸೋಮಣ್ಣಗೆ ಟಿಕೆಟ್ ಕೊಟ್ಟರೆ ಪ್ರಚಾರ ಮಾಡುವಿರಾ?’ ಎಂಬ ಪ್ರಶ್ನೆಗೆ ಮಾಧುಸ್ವಾಮಿ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳುತ್ತಲೇ ಬಂದಿದ್ದು ಈಗ ಟಿಕೆಟ್ ಕೈ ತಪ್ಪಿರುವುದು ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. ಬಸವರಾಜು ಬೆಂಬಲ ಇದೆ ಎಂಬ ಕಾರಣಕ್ಕೆ ಚುನಾವಣೆಯಿಂದ ದೂರ ಉಳಿಯುವ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇರುವ ಸಾಧ್ಯತೆಗಳೇ ಹೆಚ್ಚಿವೆ. ‘ಒಳೇಟು’ ಬೀಳಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆಗೆ ಹೊಸಬರಾದ ಕಾರಣ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲೂ ‘ಸಂಘಟಿಸಿ’ ಪ್ರಚಾರ ಮಾಡುವುದು ಕಷ್ಟಕರವಾಗಬಹುದು. ಕಾರ್ಯಕರ್ತರಿಂದ ಯಾವ ರೀತಿ ಸಹಕಾರ ಸಿಗಲಿದೆ ಎಂಬುದರ ಮೇಲೆ ಮತಬುಟ್ಟಿ ತುಂಬಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.