ADVERTISEMENT

ಮದಲಿಂಗನ ಕಣಿವೆ: ಪ್ರವಾಸಿಗರ ಲಗ್ಗೆ

ಜಿಲ್ಲೆಯ ಏಕೈಕ ಪರ್ವತ ಶ್ರೇಣಿ ಮಲಿನಗೊಳ್ಳುವ ಭೀತಿ

ಆರ್.ಸಿ.ಮಹೇಶ್
Published 15 ಜುಲೈ 2021, 8:26 IST
Last Updated 15 ಜುಲೈ 2021, 8:26 IST
ಮದಲಿಂಗನ ಕಣಿವೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಂಡು ಬಂದ ಪ್ರವಾಸಿಗರು
ಮದಲಿಂಗನ ಕಣಿವೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಂಡು ಬಂದ ಪ್ರವಾಸಿಗರು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆಯ ಮದಲಿಂಗನ ಕಣಿವೆ ಪರ್ವತ ಶ್ರೇಣಿ ಪ್ರದೇಶಕ್ಕೆ ಪ್ರವಾಸಿಗರ ದಾಂಗುಡಿ ಹೆಚ್ಚಾಗುತ್ತಿದೆ. ಸಸ್ಯಕಾಶಿಯ ಸೊಬಗನ್ನು ಸವಿಯುವುದರ ಬದಲು ಅರಣ್ಯ ಪ್ರದೇಶವನ್ನು ವಿರೂಪಗೊಳಿಸುವ ಕೆಲಸವೇ ಹೆಚ್ಚಾಗುತ್ತಿರುವುದು ಪರಿಸರ ಪ್ರೇಮಿಗಳಿಗೆ ಆತಂಕ ತಂದಿದೆ.

ತುಮಕೂರು ಜಿಲ್ಲೆಯ ಏಕೈಕ ಪರ್ವತ ಶ್ರೇಣಿಯಾಗಿರುವ ಮದಲಿಂಗನ ಕಣಿವೆ ಪ್ರದೇಶ ಜಾನಪದಕಥೆಯೊಂದಿಗೆ ಸುಂದರ ಪರಿಸರವನ್ನು ಒಡಲಲ್ಲಿ ತುಂಬಿ ಕೊಂಡಿದೆ. ಪಶ್ಚಿಮ ಘಟ್ಟಗಳ ತಿರುವುಗಳನ್ನು ಹೋಲುವ ಕಡಿದಾದ ರಸ್ತೆಗಳು, ಅಕ್ಕಪಕ್ಕದ ಸುಂದರ ಪರಿಸರ ಎಂತಹವರನ್ನು ಆಕರ್ಷಿಸದೆ ಇರಲಾರದು. ಮಳೆಗಾಲದಲ್ಲಂತೂ ಇಲ್ಲಿನ ಗಿಡಮರಗಳ ಕಲರವ, ಜಾಲಗಿರಿ ಸೇರಿದಂತೆ ವಿವಿಧ ಜಾತಿಯ ಹೂವಿನ ಘಮಲು ಹೊಸ ಲೋಕವನ್ನೆ ಸೃಷ್ಟಿಸಿ ಬಿಡುತ್ತದೆ.

ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದಂತಿರುವ ರಮ್ಯತಾಣ ಜನರನ್ನು ಆಕರ್ಷಣೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಆದರೆ ಪರಿಸರದ ಸೊಬಗು ಸವಿಯಲು ಬರುವ ಪ್ರವಾಸಿಗರು ಅರಣ್ಯ ಪ್ರದೇಶವನ್ನು ಮಲಿನ ಮಾಡಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಹಾಗೂ ಗಾಜಿನ ಬಾಟಲ್‌ಗಳ ತ್ಯಾಜ್ಯ ಬಿಸಾಡುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.

ADVERTISEMENT

ಬೆರಳೆಣಿಕೆಯಷ್ಟಿದ್ದ ಪ್ರವಾಸಿಗರ ಸಂಖ್ಯೆ ಇತ್ತೀಚೆಗೆ ದುಪ್ಪಟ್ಟಾಗಿದೆ. ಅದರಲ್ಲೂ ಶನಿವಾರ ಮತ್ತುಭಾನುವಾರ ಪ್ರವಾಸಿಗರ ದೊಡ್ಡ ಸಂಖ್ಯೆಯೇ ಜಮಾವಣೆ ಗೊಳ್ಳುತ್ತಿದೆ. ಬೆಂಗಳೂರು, ತುಮಕೂರು, ಮೈಸೂರು ಭಾಗಗಳಿಂದ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರ ವಿಕೆಂಡ್‌ ಮೋಜು-ಮಸ್ತಿಯ ಸ್ಥಳವಾಗಿ ಮಾರ್ಪಟ್ಟಿದೆ.

ವಿಕೆಂಡ್‌ ದಿನಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಬೈಕ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಪರಿಸರ ಆಹ್ಲಾದ ಪಡೆಯುವ ಬದಲು ಕೆಲ ಯುವಕರು ಹುಚ್ಚು ಸಾಹಸಗಳಿಗೆ ಮುಂದಾಗುತ್ತಿದ್ದಾರೆ. ತಮ್ಮಬೈಕ್‌ಗಳನ್ನು ಕಡಿದಾದ ಗುಡ್ಡ ಹತ್ತಿಸುವುದೂ ಅಲ್ಲದೆ ಅರಣ್ಯ ಇಲಾಖೆ ವತಿಯಿಂದ ಕಳ್ಳಬೇಟೆ ನಿಯಂತ್ರಣ ಹಾಗೂ ಬೆಂಕಿ ತಡೆಗಟ್ಟಲು ನಿರ್ಮಿಸಿರುವ ಶಾಶ್ವತ ಶಿಬಿರ ಕಟ್ಟಡದ ಬಳಿ ಜನರ ಜಾತ್ರೆಯೇ ಆಗಿ ಬಿಡುತ್ತದೆ. ಮೋಜಿಗಾಗಿ ತಂಪು ಪಾನಿಯ ಹಾಗೂ ಮದ್ಯದ ಬಾಟಲ್‌ಗಳನ್ನು ಒಡೆಯುವ ಪ್ರಯತ್ನವೂನಡೆಯುತ್ತಿದೆ.

ಇದೇ ಅರಣ್ಯ ಪ್ರದೇಶದಲ್ಲಿ ಭೂತಪ್ಪನ ದೇಗುಲವಿದ್ದು ಅಲ್ಲಿಯೂ ಅನೈರ್ಮಲ್ಯ ತಾಂಡವವಾಡುತ್ತಿದೆ. ಒಮ್ಮೊಮ್ಮೆ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಬಿಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಾರೆ ಎಲೆಮರೆ ಕಾಯಿಯಂತೆ ಅಪಾರ ಸೌಂದರ್ಯ ಸೊಬಗನ್ನು ತುಂಬಿಕೊಂಡು ಸ್ಥಳೀಯರಿಗೆ ಅನಂದ ನೀಡುತ್ತಿದ್ದ ಪರ್ವತ ಶ್ರೇಣಿ ನಿಧಾನವಾಗಿ ವಿರೂಪದತ್ತ ಸರಿಯುತ್ತಿರುವುದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.