ADVERTISEMENT

ಮಧುಗಿರಿ: ಶೇ 70ರಷ್ಟು ಬಿತ್ತನೆ ಪೂರ್ಣ

ವಾಡಿಕೆಗಿಂತ ಹೆಚ್ಚು ಮಳೆ: 23 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 4:17 IST
Last Updated 6 ಆಗಸ್ಟ್ 2021, 4:17 IST

ಮಧುಗಿರಿ: ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ 231 ಮಿ.ಮೀ ಆಗಬೇಕಿತ್ತು. ಈ ಬಾರಿ 501 ಮಿ.ಮೀ ಮಳೆಯಾಗಿದ್ದು, ಈಗಾಗಲೇ ಶೇ 70ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ತಾಲ್ಲೂಕಿನಲ್ಲಿ 35.673 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 23.801 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ‌ಯಾಗಿದೆ. ಮುಂಬುರುವ ದಿನಗಳಲ್ಲಿ ಉತ್ತಮವಾಗಿ ಮಳೆಯಾದರೆ ಶೇ 96ರಷ್ಟು ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕಿನಲ್ಲಿ ಶೇಂಗಾ 14.010 ಹೆಕ್ಟೇರ್‌, ಮುಸಕಿನ ಜೋಳ 7 ಸಾವಿರ ಹೆಕ್ಟೇರ್, ರಾಗಿ 2 ಸಾವಿರ, ತೊಗರಿ 1,225 ಹೆಕ್ಟೇರ್, ಭತ್ತ 308 ಹಾಗೂ ಅಲಸಂದೆ 87 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ADVERTISEMENT

ಬಹುತೇಕ ಗ್ರಾಮಗಳಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಕೃಷಿ ಹೊಂಡ, ಕಾಲುವೆ ಹಾಗೂ ಚೆಕ್ ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿದೆ. ಜಾನುವಾರು, ಮೇಕೆ ಮತ್ತು ಕುರಿಗಳಿಗೆ ಸದ್ಯಕ್ಕೆ ಮೇವಿಗೆ ತೊಂದರೆಯಿಲ್ಲ ಎನ್ನುತ್ತಾರೆ ಕುರಿಗಾಹಿಗಳು.

ಶೇಂಗಾ ಮತ್ತು ರಾಗಿ ಬಿತ್ತಿರುವ ಜಮೀನಿನಲ್ಲಿ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿವೆ. ಇದರಿಂದಾಗಿ ಅನೇಕರಿಗೆ ಉದ್ಯೋಗವೂ ದೊರಕಿದಂತಾಗಿದೆ. ಲಾಕ್‌ಡೌನ್‌ನಿಂದ ಕೆಂಗಟ್ಟಿದ್ದ ಕೃಷಿ ಕಾರ್ಮಿಕರಿಗೆ ಮಳೆಯಿಂದಾಗಿ ಸ್ವಲ್ಪಮಟ್ಟಿಗೆ ಕೆಲಸ ದೊರಕಿದೆ ಎನ್ನುತ್ತಾರೆ ಕಾರ್ಮಿಕರಾದ ಶಾರದಮ್ಮ.

ತಾಲ್ಲೂಕಿನ ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ ಹಾಗೂ ಪುರವರ ಹೋಬಳಿಯ ಗ್ರಾಮಗಳಲ್ಲಿ ಮುಸಕಿನ ಜೋಳ ಬೆಳೆಯಲು ರೈತರು ಹೆಚ್ಚು ಒಲವು ತೋರಿದ್ದಾರೆ. ಇದರ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೈನುಗಾರಿಕೆಯನ್ನು ದೊಡ್ಡ ಉದ್ಯಮವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.

ಉತ್ತಮವಾಗಿ ಮಳೆಯಾಗಿ ಜಯಮಂಗಲ ನದಿ ಹಾಗೂ ಕುಮುದ್ವತಿ ನದಿಗಳು ಒಮ್ಮೆ ಹರಿದರೆ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ ಎನ್ನುತ್ತಾರೆ ಈ ಭಾಗದ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.