ಮಧುಗಿರಿ: ರೈತರು ತಮ್ಮ ಜಮೀನಿನ ದಾಖಲೆಗಳನ್ನು ಸರಿಯಾಗಿ ಹೊಂದಿದ್ದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ನಡೆದ ಕಂದಾಯ ಅದಾಲತ್‌ನಲ್ಲಿ ಇ - ಪೌತಿ ಖಾತೆ ಆಂದೋಲನ, ದರಖಾಸ್ತು ಪೋಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.
ಭೂಮಿಯ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಖಾತೆ, ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಮಾಡಿಕೊಡಬೇಕು. ತಾತ ಮತ್ತು ಮುತ್ತಾತನ ಹೆಸರಿನಲ್ಲಿಯೇ ಪಹಣಿ ಇದ್ದು, ಇದನ್ನು ಸರಿಪಡಿಸಿಕೊಂಡು ಆದಷ್ಟು ಬೇಗ ತಮ್ಮ ಹೆಸರಿಗೆ ಖಾತೆಗಳನ್ನು ಮಾಡಿಸಿಕೊಂಡು ಪಹಣಿ ಹೊಂದಬೇಕು ಎಂದರು.
ತಾಲ್ಲೂಕಿನಲ್ಲಿ ಶೀಘ್ರ 122 ಮಂದಿಗೆ ಸಾಗುವಳಿ ಚೀಟಿ ನೀಡಲಾಗುವುದು. ಈಗಾಗಲೇ ಸಾಗುವಳಿ ಚೀಟಿ ನೀಡಿರುವ 100 ಮಂದಿಗೆ ಖಾತೆ ಮತ್ತು ಪಹಣಿ ಮಾಡಿಕೊಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ಅವರೇ ದರವನ್ನು ನಿಗದಿ ಮಾಡಿದಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಪೌತಿ ಖಾತೆ, ಖಾತೆ ಮತ್ತು ಪಹಣಿಗಳನ್ನು ರೈತರು ತಪ್ಪದೆ ಮಾಡಿಸಿಕೊಳ್ಳಬೇಕು. ಕಂದಾಯ ಇಲಾಖೆಯ ಪೋಡಿ, ಬಂಡಿ ಜಾಡು ಸೇರಿದಂತೆ ಹಲವು ಮಾಹಿತಿಗಳನ್ನು ರೈತರಿಗೆ ತಿಳಿಸಿದರು.
ಕಂದಾಯ ಗ್ರಾಮದ ಹಕ್ಕುಪತ್ರ 30 ಮಂದಿಗೆ, 20 ಪೌತಿ ಖಾತೆ ಹಾಗೂ 30 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್, ಡಿವೈಎಸ್‌ಪಿ ಮಂಜುನಾಥ್, ತಾ.ಪಂ.ಇಒ ಲಕ್ಷ್ಮಣ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಸಿಂಡಿಕೇಟ್ ಸದಸ್ಯ ಶಿವಣ್ಣ, ಕಂದಾಯ ಇಲಾಖೆ ಅಧಿಕಾರಿಗಳಾದ ಚಿಕ್ಕರಾಜು, ನಾಗೇಶ್, ಸುದರ್ಶನ್, ರವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.