ADVERTISEMENT

ಕುರುಬ ಸ್ವಾಮೀಜಿಯನ್ನು ಸಚಿವರು ಅವಮಾನಿಸಿಲ್ಲ

ಕುರುಬ ಸಮಾಜದ ಮುಖಂಡರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:43 IST
Last Updated 20 ನವೆಂಬರ್ 2019, 16:43 IST

ಚಿಕ್ಕನಾಯಕನಹಳ್ಳಿ: ಹುಳಿಯಾರು ಪೆಟ್ರೋಲ್ ಬಂಕ್ ಬಳಿ ಇರುವ ವೃತ್ತಕ್ಕೆ ಕನಕದಾಸರ ಹೆಸರಿಡಲು ನಮ್ಮ ಅಭ್ಯಂತರವಿಲ್ಲ, ಹೆಸರಿಡುವಾಗ ಕಾನೂನು ಚೌಕಟ್ಟಿನಲ್ಲಿ ಹೆಸರಿಡುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆಯೆ ಹೊರತು ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಮಾಡಿಲ್ಲ ಎಂದು ಗುರುಸಿದ್ದೇಶ್ವರ ಮಠದ ಗೌಡರಾದ ಇಟ್ಟಿಗೆ ರಂಗಸ್ವಾಮಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುರುಬ ಸಮಾಜದ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವರಿಗೆ ಕೆಟ್ಟ ಹೆಸರು ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಚಿವರ ಮಾತನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಸಚಿವರು ಮಾತನಾಡುವಾಗ ‘ಶ್ರೀಗಳು ಮಧ್ಯ ಮಾತನಾಡಬೇಡಿ ನಾನು ಮಾತನಾಡಿದ ನಂತರ ಮಾತನಾಡಿ’ ಎಂದು ಹೇಳಿದರೆ ಹೊರತು ಅವರಿಗೆ ಅವಮಾನ ಮಾಡಿಲ್ಲ ಎಂದರು.

ಸಮಾಜದ ಮುಖಂಡ ನಂದಿಹಳ್ಳಿ ಶಿವಣ್ಣ ಮಾತನಾಡಿ, ‘ಹುಳಿಯಾರು ಕನಕ ವೃತ್ತದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ. ಹುಳಿಯಾರಿನಲ್ಲಿ ವೀರಶೈವ ಮತ್ತು ಕುರುಬ ಸಮಾಜದವರು ಅಣ್ಣ ತಮ್ಮಂದಿರಂತಿದ್ದು, ಕೆಲವರು ಎರಡು ಸಮಾಜದ ಸಾಮರಸ್ಯದ ಬಗ್ಗೆ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

ಕುರುಬ ಸಮಾಜದ ಮುಖಂಡ ಮಿಲಿಟರಿ ಶಿವಣ್ಣ ಮಾತನಾಡಿ, ಸಚಿವರು ಕಾನೂನು ಚೌಕಟ್ಟಿನಲ್ಲಿ ಕನಕ ವೃತ್ತ ಎಂದು ನಾಮಕರಣ ಮಾಡಲು ತಿಳಿಸಿದ್ದಾರೆಯೆ ಹೊರತು ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಕೆಲವರು ಜಾತಿ ವಿಷ ಬೀಜ ಬಿತ್ತುತ್ತಿರುವುದಕ್ಕೆ ಸಮಾಜ ಕಿವಿಗೊಡಬೇಡಬಾರದು. ಸಚಿವರು ತಾಲ್ಲೂಕನ್ನು ಅಭಿವೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ಸಹಿಸಲಾಗದೆ ಕೆಲವರು ಅವರಿಗೆ ಕೆಟ್ಟ ಹೆಸರು ತರಲು ಜಾತಿ ನಿಂದನೆ ಪಟ್ಟ ಕಟ್ಟಲು ಹೊರಟಿರುವುದು ವಿಷಾದನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡರಾದ ಗಿರೀಶ್ ಇಟ್ಟಿಗೆ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಜಯದೇವ ಮೂರ್ತಿ (ಸಣ್ಣಯ್ಯ), ಡಾಬ ಶಾಂತಕುಮಾರ್, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.