ADVERTISEMENT

ಅಧಿಕಾರಿಗಳ ವಿರುದ್ಧ ಗುಡುಗಿದ ಮಾಧುಸ್ವಾಮಿ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜೆ.ಸಿ. ಮಾಧುಸ್ವಾಮಿ ತರಾಟೆ: ‘ಶೂನ್ಯ ಪ್ರಗತಿ’ಯ ಮಾಹಿತಿ ಕಂಡು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:16 IST
Last Updated 8 ಜನವರಿ 2021, 6:16 IST
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹರೀಶ್ ಬಾಬು ಅವರಿಂದ ಪ್ರಗತಿಯ ಮಾಹಿತಿ ಪಡೆದುಕೊಂಡರು. ಪ್ರಸಕ್ತ ಸಾಲಿನಲ್ಲಿ ಈವರೆಗೂ ಯಾವೊಂದು ಕೆಲಸವನ್ನೂ ಆರಂಭಿಸದಿರುವುದು ಸಚಿವರ ಸಿಟ್ಟು ನೆತ್ತಿಗೇರಿಸಿತ್ತು. ಹಣ ಇದ್ದರೂ ಕೆರೆಗಳ ನಿರ್ವಹಣೆ, ದುರಸ್ತಿಗೆ ಕಾರ್ಯಯೋಜನೆ ಸಿದ್ಧಪಡಿಸಿ, ಮಂಜೂರಾತಿ ನೀಡದಿರುವುದು ಮತ್ತಷ್ಟು ಕೆರಳಿಸಿತು.

ತಾಲ್ಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳು ‘ಶೂನ್ಯ ಪ್ರಗತಿ’ಯ ಮಾಹಿತಿ ನೀಡುವುದನ್ನು ಕಂಡು ಮತ್ತಷ್ಟು ಕೆಂಡಾಮಂಡಲವಾದರು. ಒಬ್ಬೊಬ್ಬ ಎಂಜಿನಿಯರ್ ಮಾಹಿತಿ ನೀಡುವ ಸಮಯದಲ್ಲೂ ಕುಟುಕಿದರು.

ADVERTISEMENT

‘ಫೆ. 15ರ ಒಳಗೆ ಎಲ್ಲಾ ಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲವಾದರೆ ಹಣ ಸರ್ಕಾರಕ್ಕೆ ವಾಪಸಾಗುತ್ತದೆ ಎಂದು ಪ್ರತ್ಯೇಕವಾಗಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದೇನೆ. ಆದರೂ ಏನೂ ಕೆಲಸ ಮಾಡಿಲ್ಲ. ಮೊದಲು ಜಿಲ್ಲೆಯಿಂದ ತೊಲಗಿ. ಜಿಲ್ಲೆಯಲ್ಲಿ ಸೇರಿಕೊಂಡಿರುವ ಎಂಜಿನಿಯರುಗಳಿಂದ ಜಿಲ್ಲೆಯ ಪ್ರಗತಿ ಹಾಳಾಯಿತು. ಅಭಿವೃದ್ಧಿ ಕುಂಠಿತಗೊಂಡಿತು’ ಎಂದು ಗುಡುಗಿದರು.

‘ರ‍್ಯಾಸ್ಕಲ್... ₹180 ಕೋಟಿ ಹಣ ಇದ್ದರೂ ಜಿಲ್ಲೆಯ ಒಂದು ಕೆರೆ ದುರಸ್ತಿಗೂ ಕಾರ್ಯಯೋಜನೆ ಸಿದ್ಧಪಡಿಸಿಲ್ಲ. ಏನು ಮಾಡುತ್ತಿದ್ದೀರಿ? ಕೆಲಸ ಮಾಡಲು ಸಾಧ್ಯವಾಗಿದ್ದರೆ ಜಿಲ್ಲೆಯಿಂದ ಜಾಗ ಖಾಲಿಮಾಡಿ. ಜಿ.ಪಂ.ನಿಂದ ಹಣಕಾಸು ಒಪ್ಪಿಗೆ ನೀಡಿಲ್ಲ ಎಂದು ಸಬೂಬು ಹೇಳಿಕೊಂಡು ಕಾಲ ಕಳೆದಿದ್ದೀರಿ. ನವೆಂಬರ್‌ನಲ್ಲೇ ಸಭೆ ನಡೆಸಿ ಹಣಕಾಸು ಒಪ್ಪಿಗೆ ನೀಡಿದ್ದರೂ ಏನೂ ಕೆಲಸ ಮಾಡಿಲ್ಲ. ಜಿ.ಪಂ.ನಲ್ಲಿ ಈ ವರ್ಷ ಯಾವುದೇ ಕೆಲಸಗಳು ಆಗಿಲ್ಲ. ಎಲ್ಲಾ ಅಧಿಕಾರಿಗಳು ಸೇರಿಕೊಂಡು ಜಿಲ್ಲೆಯನ್ನು ಮುಳುಗಿಸಿ ಬಿಟ್ಟಿದ್ದೀರಿ’ ಎಂದು ಕಿಡಿಕಾರಿದರು.

ಲೋಕೋಪಯೋಗಿ ಇಲಾಖೆಯಲ್ಲೂ ಲೋಪ: ಲೋಕೋಪಯೋಗಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಿಟ್ಟ ಹಣವನ್ನು ಹಿಂದಿನ ವರ್ಷ ಬಳಕೆ ಮಾಡದಿರುವುದು ಚರ್ಚೆಗೆ ಗ್ರಾಸವಾಯಿತು. ನಿಯಮದಂತೆ ಈ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಖರ್ಚು ಮಾಡದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಯಾರಾದರೂ ನ್ಯಾಯಾಲ
ಯದಲ್ಲಿ ಪ್ರಶ್ನಿಸಿದರೆ ಏನು ಗತಿ? ಯಾರಿಗೆ ಉತ್ತರ ನೀಡುವುದು ಎಂದು
ಸಚಿವರು ಅಸಮಾಧಾನ ತೋಡಿಕೊಂಡರು.

ಶಿಕ್ಷಕರಿಗೆ ಕೋವಿಡ್:ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 11, ಮಧುಗಿರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಾಲೆ ಆರಂಭದ ಸಮಯದಲ್ಲಿ ಪರೀಕ್ಷೆ ಮಾಡಿಸಿದ್ದು, ಸೋಂಕು ದೃಢಪಟ್ಟವರನ್ನು ಕ್ಯಾರಂಟೈನ್‌ನಲ್ಲಿ ಇರಿಸಲಾಗಿದೆ.

ತೆಂಗಿಗೆ ರೋಗ:ತೆಂಗಿನ ಮರಕ್ಕೆ ಕಾಣಿಸಿಕೊಂಡಿರುವ ಫಂಗಸ್ ರೋಗ ಹರಡದಂತೆ ನಿಯಂತ್ರಿಸಲು ಕ್ರಮ ವಹಿಸಬೇಕು. ವಿಜ್ಞಾನಿಗಳನ್ನು ಕರೆಸಿ ಪರಿಹಾರ ರೂಪಿಸಬೇಕು ಎಂದು ಮಾಧುಸ್ವಾಮಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.