ADVERTISEMENT

ತುಮಕೂರು: ಒಳ ಮೀಸಲಾತಿಗೆ ಮಾದಿಗರ ಪಟ್ಟು, ಅಸಹಕಾರ ಚಳವಳಿ

ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:17 IST
Last Updated 2 ಆಗಸ್ಟ್ 2025, 5:17 IST
ತುಮಕೂರಿನಲ್ಲಿ ಶುಕ್ರವಾರ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದವರು ಪ್ರತಿಭಟನೆ ನಡೆಸಿದರು
ತುಮಕೂರಿನಲ್ಲಿ ಶುಕ್ರವಾರ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದವರು ಪ್ರತಿಭಟನೆ ನಡೆಸಿದರು   

ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವಂತೆ ಪಟ್ಟು ಹಿಡಿದಿರುವ ಮಾದಿಗ ಸಮುದಾಯದವರು ಶುಕ್ರವಾರ ಬೀದಿಗಿಳಿದು ಹೋರಾಟ ನಡೆಸಿದರು.

ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಾದಿಗ ಸಮುದಾಯದವರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ, ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟಿಸಿದರು.

‘ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆ. 1ಕ್ಕೆ ಒಂದು ವರ್ಷ ತುಂಬಿದ್ದರೂ ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಮಾದಿಗ ಸಮುದಾಯವನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಇದು ಮಾದಿಗರ ವಿರೋಧಿ ಸರ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಆ. 15ರ ಒಳಗೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಸಚಿವರು, ಶಾಸಕರಿಗೆ ಘೇರಾವ್ ಹಾಕಲಾಗುವುದು. ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸಮರ್ಪಕ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಆಯೋಗ ಕೇಳಿದ ಮಾಹಿತಿಯನ್ನು ಈವರೆಗೂ ನೀಡಿಲ್ಲ. ಆರು ತಿಂಗಳಾದರೂ ಸರಿಯಾದ ಮಾಹಿತಿ ಆಯೋಗಕ್ಕೆ ಲಭ್ಯವಾಗಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನಡೆಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟು ಹಾಕಿ ನಗೆಪಾಟಲಿಗೆ ಗುರಿಯಾಗಿವೆ. ಮೂರು ವಾರಗಳಲ್ಲಿ ಸಮೀಕ್ಷೆ ಮುಗಿಸಿ, ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ ಎಂದು ಆರೋಪಿಸಿದರು.

ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಈವರೆಗೂ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ, ಚಿತ್ರದುರ್ಗದಲ್ಲಿ ನಡೆದ ಐಕ್ಯ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯಲಾಗಿದೆ. ಆದರೆ ರಾಜ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿರುವುದು ಮಾದಿಗರು, ಇತರೆ 29 ಉಪಜಾತಿಗಳ ಜನಾಕ್ರೋಶಕ್ಕೆ ಕಾರಣವಾಗಿದೆ. ವಿಳಂಬ ಧೋರಣೆಯಿಂದಾಗಿ ಸಮುದಾಯದ ಯುವಕರು ಉದ್ಯೋಗ, ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮುದಾಯದ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಡಾ.ಲಕ್ಷ್ಮಿಕಾಂತ, ಜೆ.ಎನ್.ರಾಜಸಿಂಹ, ಪಾವಗಡ ಶ್ರೀರಾಮ್, ನರಸಿಂಹಮೂರ್ತಿ, ರಮೇಶ್ ಯಲ್ಲಾಪುರ, ದಾಡಿವೆಂಕಟೇಶ್, ಹೊಸಕೋಟೆ ನಟರಾಜು, ಬಿ.ಜಿ.ಸಾಗರ್, ಪಿ.ಎನ್.ರಾಮಯ್ಯ, ಎಚ್.ಎ.ಆಂಜನಪ್ಪ, ಸೋರೆಕುಂಟೆ ಯೋಗೀಶ್, ಸಣ್ಣಭೂತಣ್ಣ, ಕೇಬಲ್ ರಘು, ಟಿ.ಡಿ.ಮೂರ್ತಿ, ರಂಗಧಾಮಯ್ಯ, ರವಿವರ್ಮಕುಮಾರ್, ಶಿವಶಂಕರ್, ಹುಲ್ಲೂರು ನಾಗೇಶ್, ವೆಂಕಟೇಶ್, ನಾರಾಯಣ್, ಲಕ್ಕೇನಹಳ್ಳಿ ದಾಸಪ್ಪ, ಲಕ್ಷ್ಮಿಪತಿ, ಲಕ್ಷ್ಮಿನರಸಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಮಾದಿಗ ವಿರೋಧಿ ಸರ್ಕಾರ

ಒಳ ಮೀಸಲಾತಿ ಜಾರಿ ಮಾಡದೆ ಮಾದಿಗ ವಿರೋಧಿ ಸರ್ಕಾರವಾಗಿದೆ ಎಂದು ಸಮುದಾಯದ ಮುಖಂಡ ಬಿ.ಎಚ್‌.ಅನಿಲ್‌ಕುಮಾರ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದು ಒತ್ತಾಯಿಸಿದರು. ಆ. 15ರ ಒಳಗೆ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.