ಮಧುಗಿರಿ ತಾಲ್ಲೂಕು ಕಂಭತ್ತನಹಳ್ಳಿ ರಸ್ತೆ ಸ್ಥಿತಿ
ಮಧುಗಿರಿ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕಂಭತ್ತನಹಳ್ಳಿಗೆ ಸುಸಜ್ಜಿತ ರಸ್ತೆ ಹಾಗೂ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯ ಮೇಲೆ ಹರಿದು ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟ್ಟಣದ ಕೆ.ಆರ್. ಬಡಾವಣೆಗೆ ಹೊಂದಿಕೊಂಡಿರುವ ಕಂಭತ್ತನಹಳ್ಳಿಗೆ ತೆರಳಲು ಒಂದು ಕಿ.ಮೀ ಆಗುತ್ತದೆ. ಪಟ್ಟಣದ ತ್ಯಾಜ್ಯ ನೀರು ಹಾಗೂ ಮಳೆ ನೀರು ಈ ಚರಂಡಿಯ ಮೂಲಕ ಕಂಭತ್ತನಹಳ್ಳಿವರೆಗೆ ಹರಿಯುತ್ತದೆ. ಪಟ್ಟಣ ವ್ಯಾಪ್ತಿಯಿಂದ ಕೆಲವೇ ಮೀಟರ್‌ಗಳಷ್ಟು ಚರಂಡಿ ಇದ್ದು, ನಂತ ಗ್ರಾಮದವರೆಗೂ ಚರಂಡಿ ಇಲ್ಲದಿರುವುದರಿಂದ ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ಹದಗೆಡುತ್ತಿದೆ.
ಮಳೆಗಾಲದಲ್ಲಿ ಮಳೆ ನೀರು ಸಂಪೂರ್ಣವಾಗಿ ರಸ್ತೆ ಮೇಲೆ ಹರಿಯುವುದರಿಂದ ರಸ್ತೆ ಯಾವುದು, ಚರಂಡಿ ಯಾವುದು ಎಂದು ತಿಳಿಯುತ್ತಿಲ್ಲ. ನಾಲ್ಕು ವರ್ಷಗಳಿಂದ ಈ ಸಮಸ್ಯೆ ಇದ್ದು, ಹಲವರು ಬಿದ್ದು ಗಾಯಗೊಂಡಿದ್ದಾರೆ.
ಪಟ್ಟಣದಲ್ಲಿ ಮಳೆ ಮತ್ತು ಚರಂಡಿ ನೀರು ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಸಮಸ್ಯೆ ನಿವಾರಣೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಈ ಹಿಂದೆ ರಸ್ತೆ ನಿರ್ಮಾಣ ಮಾಡುವಾಗ ಚರಂಡಿ ನಿರ್ಮಾಣಕ್ಕೂ ಆದ್ಯತೆ ನೀಡಬೇಕಿತ್ತು. ಆದರೆ ಹಾಗೆ ಮಾಡದ ಕಾರಣ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.
ಈ ಭಾಗದ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಕಂಭತ್ತನಹಳ್ಳಿ ಗ್ರಾಮಸ್ಥರು ಕಾರಮರಡಿ ಮತ್ತು ಲಿಂಗೇನಹಳ್ಳಿ ಮೂಲಕ ಮಧುಗಿರಿಗೆ ತೆರಳುವ ಅನಿವಾರ್ಯ ಸೃಷ್ಟಿಯಾಗಿದೆ. ಪಟ್ಟಣದ ಕೆ.ಆರ್.ಬಡಾವಣೆ ಮೂಲಕ ಕಂಭತ್ತನಹಳ್ಳಿ ರಸ್ತೆ ಅಭಿವೃದ್ಧಿಯಾದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.