ADVERTISEMENT

ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ಗರಂ; ಅಕ್ರಮ ತೆರೆದಿಟ್ಟ ಸದಸ್ಯರು

ಲೋಕಾಯುಕ್ತ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:35 IST
Last Updated 27 ಆಗಸ್ಟ್ 2021, 1:35 IST
ತುಮಕೂರು ಪಾಲಿಕೆ ಸಭೆಯಲ್ಲಿ ಸದಸ್ಯರ ಚರ್ಚೆ
ತುಮಕೂರು ಪಾಲಿಕೆ ಸಭೆಯಲ್ಲಿ ಸದಸ್ಯರ ಚರ್ಚೆ   

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸ್ಮಾರ್ಟ್ ಸಿಟಿ ಕಚೇರಿಯನ್ನು ಮುಚ್ಚಿಸಿ ಹೋರಾಟ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಸದಸ್ಯರು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಜೆ.ಕುಮಾರ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರು ಪಕ್ಷ ಭೇದ ಮರೆತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು ಅಕ್ರಮಗಳ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು. ಬಹುತೇಕ ಕಾಮಗಾರಿಗಳಲ್ಲಿ ಯೋಜನಾ
ವೆಚ್ಚವನ್ನು ಹೆಚ್ಚು ಮಾಡಿಕೊಂಡು, ಅವ್ಯ
ವಹಾರ ನಡೆಸಲಾಗಿದೆ. ಗುತ್ತಿಗೆದಾರರ ಜತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪಾಲಿಕೆಗೆ ಯೋಜನೆಗಳ ಪೂರ್ಣ ವಿವರಗಳನ್ನು ವಾರದಲ್ಲಿ ನೀಡಬೇಕು. ನಂತರ ತನಿಖೆಗೆ ಒಪ್ಪಿಸಬೇಕು ಎಂದು ಕುಮಾರ್ ಆಗ್ರಹಿಸಿದರು.

ADVERTISEMENT

‘ಸ್ಮಾರ್ಟ್ ಸಿಟಿ ಕೆಲಸಗಳು ನಗರದ ಅಭಿವೃದ್ಧಿಗಾಗಿ ನಡೆಯುತ್ತಿಲ್ಲ. ಲಂಚ ಹೊಡೆಯಲು, ಕಮಿಷನ್ ಪಡೆದುಕೊಳ್ಳಲು ಮಾಡಲಾಗುತ್ತಿದೆ. ಇದೊಂದು ಹಗರಣದ ಕೂಪವಾಗಿದೆ. ಇಷ್ಟೊಂದು ದೊಡ್ಡ ಹಗರಣ ಎಲ್ಲೂ ನಡೆದಿಲ್ಲ’ ಎಂದು ಸದಸ್ಯ ಮಂಜುನಾಥ್ ಆಕ್ರೋಶ ಹೊರ ಹಾಕಿದರು. ₹10–15 ಲಕ್ಷದಲ್ಲಿ ಪಾರ್ಕ್ಅಭಿವೃದ್ಧಿ ಮಾಡುವ ಕೆಲಸಕ್ಕೆ ₹70 ಲಕ್ಷ ವೆಚ್ಚ ಮಾಡಿದ್ದಾರೆ. ಎಷ್ಟೊಂದು ಅಗಾಧ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಸತ್ಯ ಬಿಚ್ಚಿಟ್ಟರು.

ಮತ್ತೊಬ್ಬ ಸದಸ್ಯ ಟಿ.ಎಂ.ಮಹೇಶ್ ಸಹ ಇಂತಹುದೇ ವಿಚಾರಗಳನ್ನು ಪ್ರಸ್ತಾಪಿಸಿದರು. ಅಮಾನಿಕೆರೆಗೆ ನೀರು ತುಂಬಿಸುವ ಯೋಜನೆ ವಿಫಲವಾಗಿರುವ ವಿಚಾರವನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದು, ಕೆರೆ ಯೋಜನೆ ವಿಫಲವಾದಂತೆ, ಸ್ಮಾರ್ಟ್ ಸಿಟಿ ಯೋಜನೆಯೂ ಸಂಪೂರ್ಣ ವಿಫಲವಾಗಿದೆ. ನೆಲ ಕೆರೆದು ಮೇಲೆ ಟೈಲ್ಸ್ ಹಾಕಿ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಬಿಲ್ ಮಾಡಿಕೊಂಡು ಹಣ ದೋಚುವುದು ಬಿಟ್ಟರೆ ಮತ್ತೇನೂ ಆಗುತ್ತಿಲ್ಲ. ಎಲ್ಲಕ್ಕೂ ಮಳೆ ಬಂತು, ಕೊರೊನಾ ಕಾರಣ ಎಂದು ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲಸ ಮಾಡಲಿ ಬಿಡಲಿ, ಕಳಪೆ ಕಾಮಗಾರಿಗೂ ಬಿಲ್ ಮಾಡಿಕೊಡಬೇಕು. ಏನಾದರೂ ಮಾತನಾಡಿದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತದೆ. ಮೇಲಿನವರಿಂದ ಒತ್ತಡ, ಆದೇಶವಿದೆ. ಸುಮ್ಮನೆ ಬಿಲ್ ಮಾಡಿಕೊಡಬೇಕು. ಅದಕ್ಕೆ ಕಣ್ಣು ಮುಚ್ಚಿಕೊಂಡು ಬಿಲ್ ಮಾಡುತ್ತಿದ್ದೇವೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹೇಳುತ್ತಿದ್ದಾರೆ. ಭ್ರಷ್ಟಾಚಾರ ನಡೆಸಲು ಮೇಲಿಂದ ಯಾರ ಒತ್ತಡ ಇದೆ ಎಂಬ ಸತ್ಯ ಬಹಿರಂಗವಾಗಬೇಕು ಎಂದು ಅವರು ಆಗ್ರಹಿಸಿದರು.

‘ಸ್ಮಾರ್ಟ್ ಸಿಟಿಯಲ್ಲಿ ಯಾವ ಕೆಲಸವೂ ಸಕ್ಸಸ್ ಆಗಿಲ್ಲ. ಎಲ್ಲವೂ ವಿಫಲಗೊಂಡಿದೆ. ಯೋಜನೆಯ ಉದ್ದೇಶದಂತೆ ನಡೆದಿಲ್ಲ. ಈ ಬಗ್ಗೆ ನಗರದ ಜನರು ಪ್ರತಿ ದಿನವೂ ದೂರುತ್ತಿದ್ದಾರೆ’ ಎಂದು ಸದಸ್ಯೆ ಫರಿದಾ ಬೇಗಂ ಆರೋಪಿಸಿದರು.

‘ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳು ಹಳ್ಳ ಹಿಡಿದಿವೆ. ಓದಿ ಪದವಿ ಪಡೆದವರು ಇಂತಹ ಕೆಲಸ ಮಾಡುವುದಿಲ್ಲ. ನಕಲಿ ಸರ್ಟಿಫಿಕೇಟ್ ತಂದ ಅಧಿಕಾರಿಗಳು ಮಾತ್ರ ನಕಲಿ ಕೆಲಸ ಮಾಡುವಂತಹುದು’ ಎಂದು ಸೈಯದ್ ನಯಾಜ್ ತಮ್ಮದೇ ಧಾಟಿಯಲ್ಲಿ ವ್ಯಂಗ್ಯವಾಡಿದರು.

ಎಸ್.ಎಸ್.ಪುರಂ ಭಾಗದಲ್ಲಿ ಕೆಲಸ ಆರಂಭಿಸಿ ಎರಡು ವರ್ಷ ಕಳೆದರೂ ಕೆಲಸ ಮುಗಿದಿಲ್ಲ. ಪಾರ್ಕ್ ಕೆಲಸ ಅರ್ಧಕ್ಕೆ ನಿಂತಿದೆ. ರಸ್ತೆ ನಿರ್ಮಿಸುವುದು, ಮತ್ತೆ ಹಗೆಯುವ ಕೆಲಸ ನಡೆದಿದೆ. ಜನರಿಗೆ ಉತ್ತರ ನೀಡುವುದು ಕಷ್ಟಕರವಾಗಿದೆ ಎಂದು ಮೇಯರ್ ಮುಂದಿನ ಅಂಗಳಕ್ಕೆ ಬಂದು ಸದಸ್ಯೆ ಗಿರಿಜಾ ಧನ್ಯಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಮಗ್ರವಾಗಿ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.