ತುಮಕೂರು: ಪ್ರಸ್ತುತ ಸ್ನೇಹ, ಸಂಬಂಧಗಳು ಕುಸಿಯುತ್ತಿರುವ ಸೇತುವೆಯಂತಾಗಿದ್ದು, ಸಂಬಂಧಗಳು ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಮನುಷ್ಯರ ಮೇಲಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಅಮರಜ್ಯೋತಿ ಕಲಾವೃಂದದಿಂದ ಹಮ್ಮಿಕೊಂಡಿದ್ದ ‘ಡಾ.ರಾಜ್‌ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಡಾ.ರಾಜ್‌ಕುಮಾರ್ ಕಲಾವಿದರಿಗಿಂತ ಅಪ್ಪಟ ಮನುಷ್ಯರಾಗಿ ಬಹಳ ಮುಖ್ಯ ಎನಿಸುತ್ತಾರೆ. ಜನರನ್ನು ದೇವರೆಂದು ಬದುಕಿದ್ದು ಬಹಳ ವಿಶೇಷ. ಸಾಮಾಜಿಕ ಸಾಧಕ, ಸಾಂಸ್ಕೃತಿಕ ರೂಪಕವಾಗಿ ನಮ್ಮ ಮಧ್ಯೆ ಎಂದಿಗೂ ಜೀವಂತವಾಗಿರುತ್ತಾರೆ. ಸಿನಿಮಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಅನೇಕ ರಂಗ ಮಂದಿರಗಳ ನಿರ್ಮಾಣಕ್ಕೆ ನೆರವಾಗಿದ್ದರು. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಲು ಶಕ್ತಿಧಾಮ ಆರಂಭಿಸಿದರು. ಇವತ್ತು ನೂರಾರು ಹೆಣ್ಣು ಮಕ್ಕಳಿಗೆ ಸಹಾಯವಾಗುತ್ತಿದೆ ಎಂದು ಸ್ಮರಿಸಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ವ್ಯಕ್ತಿ ಇಷ್ಟು ದೊಡ್ಡ ಸಾಧನೆ ಮಾಡುವುದು ಸುಲಭವಲ್ಲ. ಇದೊಂದು ಸಾಮಾಜಿಕ ಸಾಧನೆ. ಅವರೊಬ್ಬ ಸಿನಿಮಾ ನಟನಲ್ಲ. ಸಾಮಾಜಿಕ ಸಾಧಕ. ವೃತ್ತಿ, ಸಾಮಾಜಿಕ ಅಸಮಾನತೆ ಎರಡೂ ಅನುಭವಿಸಿ ಎತ್ತರಕ್ಕೆ ಬೆಳೆದರು. ಅವಮಾನಕ್ಕೆ ಮೌನ, ಪ್ರತಿಭೆಯಿಂದ ಪ್ರತ್ಯುತ್ತರ ಕೊಟ್ಟರು. ಸರಳತೆಗೆ ಸಂಪತ್ತಿನ ಸ್ಥಾನ, ವಿನಯಕ್ಕೆ ವಿದ್ವತ್ತಿನ ಸ್ಥಾನ ಕೊಟ್ಟವರು ಎಂದು ಬಣ್ಣಿಸಿದರು.
ತಮ್ಮ ಸಿನಿಮಾಗಳ ಮೂಲಕ ಎಲ್ಲೋ ಇದ್ದ ಜನರನ್ನು ಚಿತ್ರಮಂದಿರಗಳಿಗೆ ಕರೆ ತಂದರು. ಸಿನಿಮಾ ಬದುಕಿನ ಹೊರಗೂ ಸರಳವಾಗಿ ಜೀವಿಸಿದರು. ಇದೇ ಕಾರಣಕ್ಕೆ ಇಂದಿಗೂ ಜನರ ಮಧ್ಯೆ ಉಳಿದಿದ್ದಾರೆ ಎಂದರು.
ನಟ ಸುಂದರ್‌ರಾಜ್ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಎರಡನ್ನು ಬೆಸೆದ ಕಲಾವಿದ. ಇವತ್ತಿಗೂ ಅಹಂಕಾರ ಇಲ್ಲದೆ ಬದುಕುತ್ತಿದ್ದಾರೆ. ರಂಗಭೂಮಿ, ಚಲನಚಿತ್ರ ಎರಡರಲ್ಲೂ ತಮ್ಮದೇ ಕೊಡುಗೆ ನೀಡಿದ್ದಾರೆ. ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ವೃತ್ತಿ ರಂಗಭೂಮಿಯಲ್ಲಿ ಬಹಳಷ್ಟು ದುಡಿದಿದ್ದಾರೆ. ಈ ಇಬ್ಬರೂ ವೈವಿಧ್ಯಮಯವಾದ ವ್ಯಕ್ತಿಗಳು ಎಂದು ಹೇಳಿದರು.
ನಟ ಎಂ.ಕೆ.ಸುಂದರ್‌ರಾಜ್, ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅವರಿಗೆ ‘ಡಾ.ರಾಜ್‌ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಓ.ನಾಗರಾಜ್, ಎಲ್.ಸುಮನ, ಎಲ್.ಸುಧಾ ಮಂಜುನಾಥ್, ಎ.ಎಸ್.ರಾಜಶೇಖರ್, ಆದರ್ಶ ಅವರನ್ನು ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಹಾಯಕ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು ಇತರರು ಹಾಜರಿದ್ದರು. ದಿಬ್ಬೂರು ಮಂಜಣ್ಣ ಮತ್ತು ಕಲಾ ತಂಡದಿಂದ ಗೀತೆ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.