ADVERTISEMENT

ಉಳಿತಾಯ ಮಾಡಿ: ರೈತರಿಗೆ ಡಿ.ವೀರೇಂದ್ರ ಹೆಗ್ಗಡೆ ಸಲಹೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇವಾ ಪ್ರತಿನಿಧಿಗಳಿಗೆ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 4:32 IST
Last Updated 10 ಫೆಬ್ರುವರಿ 2021, 4:32 IST
ತುಮಕೂರಿನಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಆಟೊರಿಕ್ಷಾ ಕೀಯನ್ನು ವೀರೇಂದ್ರ ಹೆಗ್ಗಡೆ ಹಸ್ತಾಂತರಿಸಿದರು
ತುಮಕೂರಿನಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಆಟೊರಿಕ್ಷಾ ಕೀಯನ್ನು ವೀರೇಂದ್ರ ಹೆಗ್ಗಡೆ ಹಸ್ತಾಂತರಿಸಿದರು   

ತುಮಕೂರು: ರೈತರಲ್ಲಿ ಉಳಿತಾಯಮನೋಭಾವ ಬೆಳೆಸಬೇಕು. ದುಡಿಮೆಯೇ ಶ್ರೇಷ್ಠ ಎಂಬುದನ್ನು ಎಲ್ಲ
ರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಇಲ್ಲಿ ಮಂಗಳವಾರ ಸಲಹೆ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಆಟೊರಿಕ್ಷಾ ವಿತರಣಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ
ಮಾತನಾಡಿದರು.

‘ಯಾವ ಕೆಲಸವನ್ನು ಮಾಡದಿದ್ದರೆ ದೇವರು ಕಾಪಾಡುತ್ತಾನೆ ಎಂದು ಕೈಕಟ್ಟಿ ಕುಳಿತರೆ ಆಹಾರ ಬಾಯಿಗೆ ಬರುವುದಿಲ್ಲ. ದುಡಿಮೆ ಮಾಡಲು, ಕೃಷಿಗೆ ಬೇಕಾದ ಮಳೆ, ಇತರ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಕೇಳಿಕೊಳ್ಳಬೇಕು. ಬೇಡುವ ಬದಲು ದುಡಿದು ಬದುಕುವುದು ಕಲಿಯಬೇಕು. ದುಡಿಮೆ ಮಾಡದಿದ್ದರೆ ರೋಗ ಬೇಗ ಬರುತ್ತದೆ. ಪ್ರತಿ ವ್ಯಕ್ತಿಗೂ ಆತ್ಮವಿಶ್ವಾಸ ತುಂಬಿ ದುಡಿದು ಜೀವಿಸುವುದನ್ನು ಸಂಸ್ಥೆಯ ಕಾರ್ಯಕರ್ತರು ಕಲಿಸಬೇಕು ಎಂದು ಹೇಳಿದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ಸ್ವಸಹಾಯ ಸಂಘಗಳ ಮೂಲಕ ಜನರು ₹50 ಕೋಟಿ ಉಳಿತಾಯ ಮಾಡಿದ್ದಾರೆ. ಒಂದು ವರ್ಷದಲ್ಲಿ ಸಂಘಗಳಿಗೆ ₹227 ಕೋಟಿ ಸಾಲವನ್ನು ಬ್ಯಾಂಕ್‌ಗಳು ನೀಡಿವೆ. ಸುಮಾರು ₹345 ಕೋಟಿ ಮೊತ್ತದ ವಹಿವಾಟು ನಡೆದಿದೆ. ಸಾಲ ಮರುಪಾವತಿಯೂ ಸಮರ್ಪಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ಸಮಯದಲ್ಲಿ ಆನ್‌ಲೈನ್ ತರಗತಿಗಳಿಗೆ ನೆರವಾಗುವ ಸಲುವಾಗಿ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟ್ಯಾಬ್‌ಗಳನ್ನು ಕೊಡಲಾಯಿತು. ಜಿಲ್ಲೆಯಲ್ಲಿ ₹10 ಕೋಟಿ ವೆಚ್ಚದಲ್ಲಿ 82 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಧರ್ಮಸ್ಥಳ ಯೋಜನಾ ಸಂಘದ ಪ್ರತಿನಿಧಿಗಳು ಜನರ ಬಳಿ ನಂಬಿಕೆ ಉಳಿಸಿಕೊಳ್ಳಬೇಕು. ಸ್ವಾರ್ಥ ಬರಬಾರದು. ವೈಯಕ್ತಿಕ ಲಾಭದ ಭಾವನೆ ಸುಳಿಯಬಾರದು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸಂಘದ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಶಾಸಕ ಜ್ಯೋತಿ ಗಣೇಶ್, ‘ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಿರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಸರ್ಕಾರದ ಹಂತದಲ್ಲಿ ಯಾವುದೇ ಒತ್ತಾಸೆಗಳು ಇರುವುದಿಲ್ಲ. ಆದರೆ ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಜನರಿಗೆ ನೆರವಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೇಯರ್ ಫರಿದಾ ಬೇಗಂ, ಪಾಲಿಕೆ ಆಯುಕ್ತರಾದ ರೇಣುಕಾ, ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸರೆಡ್ಡಿ, ಸೀನಪ್ಪ, ದಯಾಶೀಲ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.