ADVERTISEMENT

ವಿರೋಧದ ನಡುವೆ ಮಾಲ್ ನಿರ್ಮಾಣಕ್ಕೆ ಚಾಲನೆ

ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಖಾಸಗಿಯವರಿಂದ ಮಾಲ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 7:14 IST
Last Updated 28 ಜುಲೈ 2024, 7:14 IST
ತುಮಕೂರಿನಲ್ಲಿ ಶನಿವಾರ ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಫಲಕ ವೀಕ್ಷಿಸಿದರು. ಮಾಜಿ ಶಾಸಕ ರಫಿಕ್ ಅಹಮದ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಎಸ್‌ಪಿ ಕೆ.ವಿ.ಅಶೋಕ್ ಭಾಗವಹಿಸಿದ್ದರು
ತುಮಕೂರಿನಲ್ಲಿ ಶನಿವಾರ ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಫಲಕ ವೀಕ್ಷಿಸಿದರು. ಮಾಜಿ ಶಾಸಕ ರಫಿಕ್ ಅಹಮದ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಎಸ್‌ಪಿ ಕೆ.ವಿ.ಅಶೋಕ್ ಭಾಗವಹಿಸಿದ್ದರು   

ತುಮಕೂರು: ಬಿಜೆಪಿ, ವ್ಯಾಪಾರಸ್ಥರು, ಸಾರ್ವಜನಿಕರ ವಿರೋಧದ ನಡುವೆ ನಗರದ ಹೃದಯ ಭಾಗದಲ್ಲಿರುವ ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ಹಾಗೂ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಮಾರುಕಟ್ಟೆ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಡುವೆ ಕಾರ್ಯಕ್ರಮ ನೆರವೇರಿತು. ಸುಮಾರು ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮಾರುಕಟ್ಟೆ ಜಾಗವನ್ನು ಸಾರ್ವಜನಿಕರ ಉದ್ದೇಶಕ್ಕೆ ಬಳಸಬೇಕು. ಖಾಸಗಿ ವ್ಯಕ್ತಿಗಳು ಮಾಲ್ ನಿರ್ಮಿಸಲು ಕೊಡಬಾರದು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ಥಳೀಯ ವ್ಯಾಪಾರಿಗಳು, ವರ್ತಕರು ಒತ್ತಾಯಿಸಿದ್ದರು. ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಮಹಾನಗರ ಪಾಲಿಕೆಯು ಮೊಹಮದ್ ಇಬ್ರಾಹಿಂ ಮೋಯಿನುದ್ದೀನ್ ಎಂಬುವರ ಜತೆ ಒಪ್ಪಂದ ಮಾಡಿಕೊಂಡಿದೆ.

ADVERTISEMENT

ಮಾರುಕಟ್ಟೆ ಸ್ಥಳಕ್ಕೆ ತೆರಳಲು ಬಿಜಿಎಸ್ ವೃತ್ತದಲ್ಲಿ ಸೇರಿಸಿದ್ದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಕಾರ್ಯಕ್ರಮ ಮುಗಿದ ನಂತರ ಬಿಡುಗಡೆ ಮಾಡಿದರು. ಸುಮಾರು 3 ಗಂಟೆ ಕಾಲ ಪೊಲೀಸರ ವಶದಲ್ಲಿ ಇದ್ದರು. ಬಿಜಿಎಸ್ ವೃತ್ತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ರಿಯಲ್ ಎಸ್ಟೇಟ್ ಸರ್ಕಾರ, ಪೊಲೀಸರ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಜಾಗವನ್ನು ಖಾಸಗಿ ವ್ಯಕ್ತಿಗೆ ನೀಡಲು ₹100 ಕೋಟಿ ಕಿಕ್ ಬ್ಯಾಕ್ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ಪೊಲೀಸರು ಬಿಡುಗಡೆ ಮಾಡಿದ ನಂತರ ಮಾರುಕಟ್ಟೆ ಸ್ಥಳಕ್ಕೆ ಬಂದ ಸುರೇಶ್‌ಗೌಡ, ‘ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಮಾಲ್ ನಿರ್ಮಾಣ ಮಾಡಲು ಬಿಡುವುದಿಲ್ಲ. ಈಗಿರುವ ಸ್ಥಿತಿಯಲ್ಲೇ ಜಾಗವನ್ನು ಉಳಿಸಬೇಕು. ವಿನಾಯಕ ದೇಗುಲವನ್ನು ಒಂದು ಚೂರು ಅಲುಗಾಡಿಸಲು ಅವಕಾಶ ನೀಡುವುದಿಲ್ಲ’ ಎಂದು ಗುಡುಗಿದರು.

‘ಪರಮೇಶ್ವರ ಅವರು ಬಡ, ದಲಿತ ಕುಟುಂಬದಿಂದ ಬಂದು ರಾಜಕಾರಣ ಕಟ್ಟಿಕೊಂಡಿದ್ದಾರೆ. ಮಾರುಕಟ್ಟೆ ಸ್ಥಳದಲ್ಲಿರುವ ಬಡವರು, ದಲಿತರಿಗೆ ಅನ್ಯಾಯಮಾಡಿ ಮಾಲ್ ನಿರ್ಮಾಣ ಮಾಡಿಸುತ್ತಿದ್ದಾರೆ. ಮೊದಲು ಬಡ ವ್ಯಾಪಾರಿಗಳಿಗೆ ಕಟ್ಟಡ ನಿರ್ಮಿಸಿಕೊಟ್ಟು, ನಂತರ ಯಾವ ಕಟ್ಟಡ ಬೇಕಾದರೂ ಕಟ್ಟಿಸಿಕೊಳ್ಳಲಿ’ ಎಂದರು.

ಶಾಸಕ ಜ್ಯೋತಿಗಣೇಶ್, ‘ಮೂರು ವರ್ಷಗಳ ಹಿಂದೆ ಮಾಲ್ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಯಿಂದ ಮಾಡಿಕೊಂಡಿದ್ದ ಒಪ್ಪಂದವನ್ನು ತಡೆ ಹಿಡಿಯಲಾಗಿತ್ತು. ಈಗ ಏಕಾಏಕಿ ಗುದ್ದಲಿ ಪೂಜೆ ಮಾಡಲಾಗಿದೆ. ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದು. ತರಕಾರಿ, ಹೂ, ಹಣ್ಣು ಮಾರಾಟಗಾರರಿಗೆ ಜಾಗವನ್ನು ಮೀಸಲಿಡಬೇಕು. ಈಗಿರುವ ಸ್ಥಿತಿಯಲ್ಲೇ ಖಾಲಿ ಜಾಗ ಉಳಿಯಬೇಕು’ ಎಂದು ಒತ್ತಾಯಿಸಿದರು.

ಸಚಿವ ಪ್ರತಿಕ್ರಿಯೆ: ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವುಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಬಿಜೆಪಿಯವರು ಇರುವುದೇ ವಿರೋಧ ಮಾಡಲು. ಅವರು ವಿರೋಧಿಸುತ್ತಿರಲಿ, ನಾವು ಅಭಿವೃದ್ಧಿ ಮಾಡುತ್ತೇವೆ. ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸುವಂತೆ ಅವರಲ್ಲೂ ಮನವಿ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು
ತುಮಕೂರಿನ ಸಿದ್ಧಿವಿನಾಯಕ ಮಾರುಕಟ್ಟೆ ಜಾಗಕ್ಕೆ ಶಾಸಕರಾದ ಬಿ.ಸುರೇಶ್‌ಗೌಡ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿದ್ದರು

₹99 ಕೋಟಿ ವೆಚ್ಚ

ತುಮಕೂರು: ಎಪಿಎಂಸಿಗೆ (ಸಿದ್ಧಿವಿನಾಯಕ ಮಾರುಕಟ್ಟೆ) ಸೇರಿದ ಜಾಗದ ಒಂದು ಎಕರೆ ಪ್ರದೇಶದಲ್ಲಿ ₹99 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಸಚಿವ ಜಿ.ಪರಮೇಶ್ವರ ತಿಳಿಸಿದರು.

ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಮೂರು ವರ್ಷದ ಹಿಂದೆ ಯೋಜನೆ ರೂಪಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ. 18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ನಗರದ ಬೆಳವಣಿಗೆ ದೃಷ್ಟಿಯಿಂದ ಇಂತಹ ಕಟ್ಟಡಗಳ ನಿರ್ಮಾಣ ಅಗತ್ಯವಿದೆ’ ಎಂದು ಹೇಳಿದರು.

ಸ್ಥಳದಲ್ಲಿರುವ ಗಣಪತಿ ದೇಗುಲವನ್ನು ಪಕ್ಕದಲ್ಲೇ ನಿರ್ಮಿಸಿಕೊಡಲಾಗುವುದು. ಸ್ಥಳೀಯ ತರಕಾರಿ ಮಾರುಕಟ್ಟೆ ವ್ಯಾಪಾರಿಗಳಿಗೆ ಮಾಲ್‌ನಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

‘ಬ್ರ್ಯಾಂಡ್‌ ಬೆಂಗಳೂರು’ಗೆ ತುಮಕೂರು ಸೇರ್ಪಡೆ

ತುಮಕೂರು: ‘ಬ್ರ್ಯಾಂಡ್‌ ಬೆಂಗಳೂರು’ ವ್ಯಾಪ್ತಿಗೆ ತುಮಕೂರು ನಗರವನ್ನು ಸೇರಿಸುವಂತೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಜಿ.ಪರಮೇಶ್ವರ ಹೇಳಿದರು. ತುಮಕೂರು ನಗರ ವೇಗವಾಗಿ ಬೆಳೆಯುತ್ತಿದ್ದು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಬಂದರೆ ನಗರದ ಪ್ರಗತಿಗೆ ಮತ್ತಷ್ಟು ವೇಗ ಸಿಗುತ್ತದೆ. ಆ ಕಾರಣಕ್ಕೆ ಅದರ ವ್ಯಾಪ್ತಿಗೆ ತರುವಂತೆ ಕೋರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.