ಮಧುಗಿರಿ: ಪಟ್ಟಣದ ದಂಡಿನ ಮಾರಮ್ಮ ಬೆಳ್ಳಿ ಪಲ್ಲಕ್ಕಿ ಉತ್ಸವ ಬುಧವಾರ ಮಧ್ಯರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬುಧವಾರ ಸಂಜೆಯಿಂದಲೇ ರಾಜ್ಯ ಹಾಗೂ ಸೀಮಾಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದಂಡಿನ ಮಾರಮ್ಮ ದೇವಾಲಯ ಮುಂಭಾಗ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ, ಆರತಿ ಬೆಳಗಿದರು.
ಬುಧವಾರ ಮಧ್ಯರಾತ್ರಿ ದೇವಾಲಯದಿಂದ ದಂಡಿನ ಮಾರಮ್ಮ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಬೆಳ್ಳಿ ಪಲ್ಲಕ್ಕಿ ಮೇಲೆ ಪ್ರತಿಷ್ಠಾಪಿಸಲಾಯಿತು. ಬೆಳ್ಳಿ ಪಲ್ಲಕ್ಕಿಗೆ ಹೂವು, ಪುರಿ ಮತ್ತು ಬಾಳೆಹಣ್ಣು ಅರ್ಪಿಸಿ ಹರಕೆ ತೀರಿಸಿದರು.
ಬೆಳ್ಳಿ ಪಲ್ಲಕ್ಕಿ ಉತ್ಸವ ಆರಂಭವಾದಾಗ ಜಾತ್ರೆಯ ಆವರಣದಲ್ಲಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಸಿಡಿಮದ್ದಿನ ಪ್ರದರ್ಶನ ವೀಕ್ಷಿಸಲು ದೇವಾಲಯದ ಆವರಣದ ಸುತ್ತಲೂ ಸಾವಿರಾರು ಮಂದಿ ಜಮಾಯಿಸಿ ಸಂಭ್ರಮಿಸಿದರು.
ಇಡೀ ರಾತ್ರಿ ಜಾತ್ರೆಯಲ್ಲಿ ಉತ್ಸಾಹದಿಂದ ಓಡಾಡಿದ ಜನರು ಬೆಳ್ಳಿ ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ತುಂಬಿಕೊಂಡರು. ಬೇಸಿಗೆಯ ಧಗೆ ತಣಿಸಿಕೊಳ್ಳಲು ಕಲ್ಲಂಗಡಿ, ಐಸ್‌ಕ್ರೀಮ್, ಕಬ್ಬಿನ ಹಾಲು ಮತ್ತು ತಂಪು ಪಾನೀಯಗಳ ಮೊರೆ ಹೋದರು. ಜಾತ್ರೆಯಲ್ಲಿನ ಆಟೋಪಕರಣಗಳಲ್ಲಿ ಕುಳಿತು ಸಂಭ್ರಮಸಿದರು.
ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದಾನಿಗಳು ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಜಾತ್ರೆ ಉದ್ಘಾಟಿಸಿ ಮಾತನಾಡಿ, ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ ಜನರಿಗೆ ಅನುಕೂಲವಾಗುವ ಎಲ್ಲ ಸೌಕರ್ಯ ಒದಗಿಸಲಾಗಿದೆ. ದೇವಿಯ ತೆಪ್ಪೋತ್ಸವ ಮುನ್ನವೇ ತುಮಕೂರು ರಸ್ತೆಗೆ ಡಾಂಬರೀಕರಣ ಮಾಡಿಸಲಾಗಿದೆ ಎಂದರು.
ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳ ರೈತರಿಗೆ ಬಹುಮಾನ ವಿತರಿಸಲಾಯಿತು.
ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ, ಜಿ.ಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಎನ್.ಗಂಗಣ್ಣ, ತಹಶೀಲ್ದಾರ್ ಶಿರಿನ್ ತಾಜ್, ಡಿವೈಎಸ್‌ಪಿ ಮಂಜುನಾಥ್, ಪುರಸಭೆ ಅಧ್ಯಕ್ಷ ಜಿ.ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸಿಪಿಐ ಹನುಮಂತರಾಯಪ್ಪ, ಮುಖಂಡರಾದ ಎಂ.ಜಿ.ಶ್ರೀನಿವಾಸ್ ಮೂರ್ತಿ, ಟಿ.ರಾಮಣ್ಣ ಅರ್ಚಕ ಅರುಣ್, ಕಂದಾಯ ನಿರೀಕ್ಷಿಕ ನಾಗೇಶ್ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.