ADVERTISEMENT

ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:09 IST
Last Updated 16 ಡಿಸೆಂಬರ್ 2025, 5:09 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕೊರಟಗೆರೆ: ‘ಹಿಂದುಳಿದ ವರ್ಗಗಳದಲ್ಲಿ ಕುರುಬರು ಬಿಟ್ಟರೆ ಎರಡನೇ ಸ್ಥಾನ ಈಡಿಗ ಸಮುದಾಯದವರಿದ್ದಾರೆ. ಆದರೂ ರಾಜ್ಯ ಸರ್ಕಾರ ಮೀಸಲಾತಿಯಲ್ಲಿ ನಮ್ಮನ್ನು ಪರಿಗಣಿಸುತ್ತಿಲ್ಲ’ ಎಂದು ಚಿತ್ತಾಪುರ ತಾಲ್ಲೂಕಿನ ಕರಗಲ್ಲು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಡಿಗ ಸಮುದಾಯ ಈಗ 2ಎ ನಲ್ಲಿ ಇದ್ದು, ಅದನ್ನು ಪರಿಶಿಷ್ಟ ಪಂಗಡ ಮೀಸಲಾತಿಗೆ ಸೇರಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ನಾರಾಯಣ ಗುರು ಅವರ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಬೇಕು. ಇದರ ಹಿನ್ನೆಲೆಯಲ್ಲಿ ಸಮುದಾಯದ ಸಂಘಟನೆ ಹಾಗೂ ಏಳಿಗೆಗಾಗಿ ಜ. 26 ರಂದು ನಾರಾಯಣಶಕ್ತಿ ಪೀಠದಿಂದ ಪಾದಯಾತ್ರೆ ಪ್ರಾರಂಭಿಸಿ ಸ್ವತಂತ್ರ ಉದ್ಯಾನದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿನಿತ್ಯ 20 ಕಿ.ಮೀ ಪಾದಯಾತ್ರೆ ಮಾಡುವುದರ ಜೊತೆಗೆ ಅಲ್ಲಲ್ಲಿ ಬಹಿರಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಉಡುಪಿ, ಮಂಗಳೂರು, ಕಾರವಾರ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 27 ಜಿಲ್ಲೆಯಲ್ಲಿ ಈಡಿಗ ಬಿಲ್ಲವ ನಾಮಧಾರಿ ಸಮುದಾಯ ಸುಮಾರು 35 ರಿಂದ 40 ಲಕ್ಷ ಜನಸಂಖ್ಯೆ ಇದೆ. ಆಡಳಿತ ಪಕ್ಷದಲ್ಲಿ 6 ಶಾಸಕರಿದ್ದಾರೆ. ಒಬ್ಬರು ಮಂತ್ರಿಯಾಗಿದ್ದಾರೆ. ವಿರೋಧ ಪಕ್ಷದಲ್ಲಿ ಒಬ್ಬರು ಸಂಸದ, ಒಬ್ಬರು ಶಾಸಕರು ಇದ್ದಾರೆ. ಒಟ್ಟು 9 ಜನ ನಮ್ಮ ಸಮುದಾಯದ ಜನಪ್ರತಿನಿಧಿಗಳಿದ್ದಾರೆ. ಆದರೂ ಸಮುದಾಯಕ್ಕೆ ಈ ಕಾಂಗ್ರೆಸ್ ಸರ್ಕಾರ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರ ಈಡಿಗ ಸಮುದಾಯವನ್ನು ಕಡೆಗಣಿಸುತ್ತಿದೆ’ ಎಂದರು.

ADVERTISEMENT

ಸೇಂದಿ ಮಾರಾಟ ಈಡಿಗ ಸಮುದಾಯದ ಕುಲಕಸುಬು. ಆದರೆ 2004ರಲ್ಲಿ ರಾಜ್ಯದಲ್ಲಿ ಸೇಂದು ನಿಷೇಧ, 2007ರಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಇದರಿಂದ ಸಮುದಾಯದ ವ್ಯವಹಾರಕ್ಕೆ ದೊಡ್ಡ ನಷ್ಟವಾಯಿತು. ಇವೆರಡನ್ನು ನಿಷೇಧ ಮಾಡಿದ ಮೇಲೆ ಸಮುದಾಯಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಸರ್ಕಾರ ಮಾಡಲಿಲ್ಲ. ರಾಜ್ಯದ 13600 ಮದ್ಯದ ಅಂಗಡಿ ಪೈಕಿ ನಮ್ಮ ಸಮುದಾಯದವರ ಸುಮಾರು 2600 ಅಂಗಡಿ ಇವೆ. ಕುಲಕಸುಬು ನಿಲ್ಲಿಸಿದ ಮೇಲೆ ಈಡಿಗ ಸಮುದಾಯ ಬೀದಿಗೆ ಬಂದರು. ಮಕ್ಕಳ ಶಿಕ್ಷಣಕ್ಕೆ ಹೊಡೆತವಾಯಿತು ಎಂದರು.

ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮಿನರಸಯ್ಯ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.