ADVERTISEMENT

ಕುಣಿಗಲ್ | ಹಳ್ಳದಲ್ಲಿ ಕೊಚ್ಚಿಹೋದ ಯುವತಿ; ನಾಲ್ವರು ನೀರುಪಾಲು

ಹಳ್ಳದಲ್ಲಿ ಕೊಚ್ಚಿಹೋದ ಯುವತಿ, ಮಹಿಳೆ ಸಹೋದರರಿಬ್ಬರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 20:12 IST
Last Updated 28 ನವೆಂಬರ್ 2021, 20:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕುಣಿಗಲ್(ತುಮಕೂರು): ಮಾರ್ಕೋನಹಳ್ಳಿ ಜಲಾಶಯದ ಕೋಡಿಹಳ್ಳದ ಬಳಿ ಭಾನುವಾರ ಮಧ್ಯಾಹ್ನ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಮಕ್ಕಳನ್ನು ಕುಟುಂಬ ಸದಸ್ಯರೇ ರಕ್ಷಿಸಿದ್ದಾರೆ.

ಕೋಡಿಹಳ್ಳವೀಕ್ಷಿಸಲು ತೆರಳಿದ್ದ ಕೋಟೆ ಪ್ರದೇಶದ ಎರಡು ಕುಟುಂಬದ ಸದಸ್ಯರು ಆಟವಾಡಲು ನೀರಿಗೆ ಇಳಿದಾಗ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಪರ್ವೀನ್ ತಾಜ್ (35) ಮತ್ತು ಸಾದಿಕಾ (17) ಕೊಚ್ಚಿ ಹೋಗಿದ್ದಾರೆ. ಅರ್ಮಾನ್ (5) ಮತ್ತು ತಬರೆಸ್ (11) ಎಂಬ ಮಕ್ಕಳು ರೇಷ್ಮಾ ಎಂಬುವವರ ಸಮಯ ಪ್ರಜ್ಞೆಯಿಂದಾಗಿ ಬದುಕಿ ಉಳಿದಿದ್ದಾರೆ.

ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ಸಹೋದರರಿಬ್ಬರು ನೀರು ಪಾಲಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ADVERTISEMENT

ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ ಮತ್ತು ಯುವತಿಗಾಗಿ ಪರಿಶೀಲನೆ ನಡೆಸುತ್ತಿದ್ದ ಪೊಲೀಸರಿಗೆ ಹಳ್ಳದ ದಡದಲ್ಲಿ ನಿಂತಿದ್ದ ವಾರಸುದಾರರಿಲ್ಲದ ದ್ವಿಚಕ್ರ ವಾಹನ ಪತ್ತೆಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ವಾಹನ ತಂದಿದ್ದ ಯುವಕರಿಬ್ಬರೂ ನೀರು ಪಾಲಾಗಿರುವ ವಿಷಯ ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.

ನಾಪತ್ತೆಯಾದವರನ್ನು ತಾಲ್ಲೂಕಿನ ಎಡೆಯೂರಿನ ಹನುಮಂತರಾವ್ ಎಂಬುವವರ ಮೊಮ್ಮಕಳಾದ ರಾಜು (23) ಮತ್ತು ಅಪ್ಪು (17) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನವನ್ನು ಈಸಹೋದರರು ತಂದಿರುವುದುಖಚಿತವಾಗಿದೆ. ನೀರಿನಲ್ಲಿ ಆಟವಾಡುತ್ತಿದ್ದ ಇಬ್ಬರೂ ನಂತರ ಕಾಣೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೈಕ್‌ ಸಿಕ್ಕ ಸ್ಥಳದ ಸುತ್ತಮುತ್ತ ಸಹೋದರರಿಗಾಗಿಪೊಲೀಸರು ಹುಡುಕಾಟ ನಡೆಸಿದ್ದು, ಈವರೆಗೂ ಅವರು ಪತ್ತೆಯಾಗಿಲ್ಲ. ಅವರು ತಂದಿದ್ದ ದ್ವಿಚಕ್ರವಾಹನ ಅನಾಥವಾಗಿ ನಿಂತಿದೆ. ಹಾಗಾಗಿ ಈ ಇಬ್ಬರೂ ನೀರು ಪಾಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಚ್ಚಿ ಹೋದವರಿಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.