ADVERTISEMENT

ಗೋಡೇಕೆರೆ ಸ್ಥಿರಪಟ್ಟ ಪೀಠಕ್ಕೆ ಉತ್ತರಾಧಿಕಾರಿ ಆಯ್ಕೆ

ಮರಿ ಸ್ವಾಮೀಜಿ ಸಿದ್ದೇಶ್ವರ ಶ್ರೀಗೆ ಸ್ಥಿರಪೀಠಾಧ್ಯಕ್ಷ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಶಿಷ್ಯದೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 13:46 IST
Last Updated 18 ಮೇ 2019, 13:46 IST
ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಶ್ರೀ ಸಿದ್ದರಾಮೇಶ್ವರ ದೇವಾಲಯದ ಸ್ಥಿರಪಟ್ಟಾಧ್ಯಕ್ಷ ಪೀಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶ್ರೀಸಿದ್ದೇಶ್ರವರನ್ನು ದೇವಾಲಯದಿಂದ ಮಠಕ್ಕೆ ಕರೆತರಲಾಯಿತು.ಸಿದ್ದರಾಮದೇಶೀಕೇಂದ್ರಸ್ವಾಮೀಜಿ, ಶಾಸಕ ಜೆ.ಸಿ.ಮಾಧುಸ್ವಾಮಿ, ಇದ್ದಾರೆ.  
ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಶ್ರೀ ಸಿದ್ದರಾಮೇಶ್ವರ ದೇವಾಲಯದ ಸ್ಥಿರಪಟ್ಟಾಧ್ಯಕ್ಷ ಪೀಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶ್ರೀಸಿದ್ದೇಶ್ರವರನ್ನು ದೇವಾಲಯದಿಂದ ಮಠಕ್ಕೆ ಕರೆತರಲಾಯಿತು.ಸಿದ್ದರಾಮದೇಶೀಕೇಂದ್ರಸ್ವಾಮೀಜಿ, ಶಾಸಕ ಜೆ.ಸಿ.ಮಾಧುಸ್ವಾಮಿ, ಇದ್ದಾರೆ.     

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪ್ರಸಿದ್ಧ ಗೋಡೆಕೆರೆ ಸಿದ್ದರಾಮೇಶ್ವರ ಮಠದ ಸ್ಥಿರಪಟ್ಟಾಧ್ಯಕ್ಷ ಪೀಠದ ಉತ್ತರಾಧಿಕಾರಿಯಾಗಿ ಸಿದ್ದೇಶ್ವರ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಹಿರಿಯ ಸ್ಥಿರಪೀಠಾಧ್ಯಕ್ಷರಾದ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಶಿಷ್ಯದೀಕ್ಷೆ ನೀಡಿದರು.

ಶಿಷ್ಯ ಸ್ವೀಕಾರ ಕಾರ್ಯ ನೆರವೇರಿಸಿದ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಠದ ಪರಂಪರೆಯಲ್ಲಿ ಈವರೆಗೆ ಆಗಿ ಹೋದ 8 ಮಠಾಧಿಪತಿಗಳು ಸಿದ್ದರಾಮೇಶ್ವರರು ಹಾಕಿಕೊಟ್ಟ ಹಾದಿಯಲ್ಲಿ ಮಠವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಗುರು-ಶಿಷ್ಯ ಪರಂಪರೆಯು ಆಯಾ ಕಾಲಘಟ್ಟಕ್ಕೆ ತಕ್ಕಂತೆ ನಡೆಯುತ್ತಿದ್ದು, ಈಗಲೂ ಸಹ ಮರಿಸ್ವಾಮಿಗಳ ಶಿಷ್ಯಸ್ವೀಕಾರದ ನಂತರ ಜ್ಞಾನಾರ್ಜನೆ ಹಾಗೂ ಇನ್ನಿತರ ಎಲ್ಲ ಹೊಣೆಗಾರಿಕೆಯನ್ನು ಮಠ ನಿರ್ವಹಿಸಲಿದೆ ಎಂದರು.

10ನೇ ತರಗತಿಯ ನಂತರ ಸಂಸ್ಕೃತ, ವೇದಪಾಠ, ಜೋತಿಷ್ಯ ಹಾಗೂ ಇನ್ನಿತರ ಧಾರ್ಮಿಕ ಜ್ಞಾನದ ಅರಿವನ್ನು ಮಠದ ತೀರ್ಮಾನದಂತೆ ಮುಂದುವರಿಸಲಾಗುವುದು. ಐದಾರು ವರ್ಷಗಳ ಕಠಿಣಾಭ್ಯಾಸದ ನಂತರ ನೂತನ ಸ್ವಾಮೀಜಿ ಪೀಠಾರೋಹಣ ಕಾರ್ಯ ವಿಜೃಂಭಣೆಯಿಂದ ನೆರವೇರಲಿದೆ ಎಂದರು.

ADVERTISEMENT

ಶಿಷ್ಯಧೀಕ್ಷೆ ಸ್ವೀಕಾರ ಸಮಾರಂಭ ಗೋಡೆಕೆರೆ ಶ್ರೀಸಿದ್ದರಾಮೇಶ್ವರ ದೇವಾಲಯದಲ್ಲಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು. ದೀಕ್ಷೆ ಪಡೆದ ಮರಿಸ್ವಾಮಿ ಸಿದ್ದೇಶ್ ಅವರೊಂದಿಗೆ ದೇಗುಲದ ಅರ್ಚಕರು ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು.

ಮಂಗಳವಾದ್ಯದೊಂದಿಗೆ ಎಲ್ಲ ದೇವರುಗಳ ದರ್ಶನ ಪಡೆದು, ದೇವಾಲಯದಿಂದ ಸ್ಥಿರಪಟ್ಟಾಧ್ಯಕ್ಷ ಪೀಠ ಇರುವ ಮಠದ ಸನ್ನಿಧಿಗೆ ವಿವಿಧ ಸಮಾಜದ ಮುಖಂಡರೊಂದಿಗೆ ಹಿರಿಯ ಸ್ವಾಮೀಜಿ ಮರಿಸ್ವಾಮೀಜಿ ಅವರನ್ನು ಕರೆದುಕೊಂಡು ಬಂದರು.

ಮಠದ ಆವರಣದಲ್ಲಿ ಗಣ್ಯರ ಸಮ್ಮುಖದಲ್ಲಿ ವೇದಘೋಷ, ಮಂತ್ರಪಠಣದೊಂದಿಗೆ ನಡೆಸಲಾಯಿತು. ಶಿಷ್ಯತ್ವ ಸ್ವೀಕಾರ ಸಮಾರಂಭ ನಡೆಯಿತು. ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಪಂಚಾಕ್ಷರಿ, ಬಿ.ಎನ್.ಶಿವಪ್ರಕಾಶ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಶಿಧರ್, ಟಿಎಪಿಎಂಸಿ ಅಧ್ಯಕ್ಷ ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.