ADVERTISEMENT

ವಿ.ವಿ ಮಕ್ಕಳಿಗೆ ₹5ಕ್ಕೆ ಊಟ

ಮಾರ್ಚ್‌ 6ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 15:47 IST
Last Updated 4 ಮಾರ್ಚ್ 2023, 15:47 IST
ಜಪಾನಂದ ಸ್ವಾಮೀಜಿ
ಜಪಾನಂದ ಸ್ವಾಮೀಜಿ   

ತುಮಕೂರು: ವಿಶ್ವವಿದ್ಯಾನಿಯದಲ್ಲಿ ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ₹5ಕ್ಕೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ಕೆ ಮಾರ್ಚ್‌ 6ರಂದು ಚಾಲನೆ ಸಿಗಲಿದೆ.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗಡೆ ಭಾಗವಹಿಸಲಿದ್ದಾರೆ ಎಂದು ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಇಲ್ಲಿ ಶನಿವಾರ ಹೇಳಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮ ಮತ್ತು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ವತಿಯಿಂದ ಆದರ್ಶ ನಗರದ ಶಿರಡಿ ಸಾಯಿ ಮಂದಿರದ ಸಹಕಾರದೊಂದಿಗೆ ಊಟ ವಿತರಣೆ ಮಾಡಲಾಗುತ್ತದೆ. ಹಳ್ಳಿಯ ಮಕ್ಕಳ ಹಸಿವು ನೀಗಿಸಲು ಈ ಕೆಲಸ ಆರಂಭವಾಗಲಿದೆ. ವಿಶ್ವವಿದ್ಯಾನಿಲಯದಲ್ಲಿ ಮಧ್ಯಾಹ್ನದ ಊಟ ನೀಡುತ್ತಿರುವುದು ಇಡೀ ರಾಷ್ಟ್ರದಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ವಿಶ್ವವಿದ್ಯಾನಿಲಯದ ಸುಮಾರು 1,500 ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಶಿರಡಿ ಸಾಯಿ ಮಂದಿರದಲ್ಲಿ ಊಟ ತಯಾರಿಸಿ, ವಿ.ವಿಗೆ ತರಲಾಗುತ್ತದೆ. ಭಟ್ಟರ ನೇಮಕ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿ.ವಿ ಆವರಣದಲ್ಲಿಯೇ ಆಧುನಿಕ ತಂತ್ರಜ್ಞಾನದ ಸೌಲಭ್ಯವುಳ್ಳ ಅಡುಗೆ ಕೋಣೆ ನಿರ್ಮಿಸುವ ಉದ್ದೇಶವಿದೆ ಎಂದರು.

ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ವಿ.ವಿಗೆ ಪ್ರತಿ ದಿನ 6,500 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅಗತ್ಯ ಸೌಲಭ್ಯಗಳ ಕೊರೆತೆಯಿಂದಾಗಿ ಪಾಳಿ ಪ್ರಕಾರ ತರಗತಿಗಳು ನಡೆಯುತ್ತಿವೆ. ಸಮಸ್ಯೆ ಸರಿದೂಗಿಸಲು ತಾಲ್ಲೂಕಿನ ಬಿದರಕಟ್ಟೆಯಲ್ಲಿ ನೂತನ ಕ್ಯಾಂಪಸ್‌ ನಿರ್ಮಾಣವಾಗುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಉದ್ಘಾಟನೆ ಮಾಡಲಾಗುವುದು’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಊಟ ವಿತರಣೆಯಲ್ಲಿ ವಿಶ್ವವಿದ್ಯಾನಿಲಯದಿಂದ ಯಾವುದೇ ಅನುದಾನ ನೀಡುತ್ತಿಲ್ಲ. ದಾನಿಗಳಿಂದಲೇ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಎಲ್ಲ ಕಾಲೇಜುಗಳಿಗೆ ವಿಸ್ತರಿಸುವ ಗುರಿ ಇದೆ ಎಂದರು.

ಶಿರಡಿ ಸಾಯಿ ಮಂದಿರದ ಮುಖಂಡ ನಟರಾಜ್‌, ‘ಪೌಷ್ಟಿಕಾಂಶಯುಕ್ತ ಆಹಾರ ವಿತರಣೆಗೆ ಆದ್ಯತೆ ನೀಡಲಾಗುತ್ತದೆ. ಒಂದು ಊಟಕ್ಕೆ ₹18 ಖರ್ಚಾಗುತ್ತದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ವಿ.ವಿ ಆವರಣದಲ್ಲಿ ಊಟ ವಿತರಣೆ ಮಾಡಲಾಗುತ್ತದೆ’ ಎಂದು ಹೇಳಿದರು.

ವಿಶ್ವವಿದ್ಯಾನಿಲಯ ಕುಲಸಚಿವೆ ನಹಿದಾ ಜಮ್ ಜಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.